16 October 2026 |

ಅ.17ರಿಂದ 22ರವರೆಗೆ 100ನೇ ವರ್ಷದ ‘ಸಜೀಪ ದಸರಾ’ ಸಂಭ್ರಮ; ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ

  • 15 Oct 2026 10:30:03 AM

ಬಂಟ್ವಾಳ/ಸಜೀಪಮೂಡ: ಸುಭಾಷ್ ಯುವಕ ಮಂಡಲ (ರಿ.) ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ, ಸುಭಾಷ್ ನಗರ, ಸಜೀಪಮೂಡ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ 100ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ‘ಸಜೀಪ ದಸರಾ’ ಅಕ್ಟೋಬರ್ 17ರಿಂದ 22ರವರೆಗೆ ಸುಭಾಷ್ ನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

 

ಆರು ದಿನಗಳ ಕಾಲ ನಡೆಯಲಿರುವ ಈ ಮಹೋತ್ಸವದಲ್ಲಿ ಶ್ರೀ ಶಾರದಾ ದೇವಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 

ಅಕ್ಟೋಬರ್ 17ರ ಶನಿವಾರ ಸಂಜೆ 6 ಗಂಟೆಯಿಂದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕಲಾವಿದರಿಂದ ಆಕರ್ಷಕ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ನಡೆಯಲಿದೆ.

 

ಅಕ್ಟೋಬರ್ 18ರ ಭಾನುವಾರ ಸಂಜೆ 6:30ರಿಂದ ಪ್ರತಿಷ್ಠಿತ ಸಂಗೀತ ಕಲಾವಿದರ ತಂಡದಿಂದ ‘ಸಂಗೀತ ವೈಭವ’ ಕಾರ್ಯಕ್ರಮ ಜರುಗಲಿದೆ.

 

ಅಕ್ಟೋಬರ್ 19ರ ಸೋಮವಾರ ಚಾ-ಪರ್ಕ ಕುಡ್ಲ ಕಲಾವಿದರಿಂದ ಸೂಪರ್ ಹಿಟ್ ತುಳು ಹಾಸ್ಯಮಯ ನಾಟಕ ‘ಯಾನೊರಿ ಬರೊಲಿಯ’ ಪ್ರದರ್ಶನಗೊಳ್ಳಲಿದೆ.

 

ಅಕ್ಟೋಬರ್ 20ರ ಮಂಗಳವಾರ ನಟರಾಜ ನೃತ್ಯಾಲಯದ ಕಲಾವಿದರು ಹಾಗೂ ಸುಭಾಷ್ ನಗರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

 

ಮಹೋತ್ಸವದ ಅಂಗವಾಗಿ ಪ್ರತಿದಿನ ಬೆಳಗ್ಗಿನಿಂದ ಶ್ರೀ ದೇವಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಲಿವೆ.

 

ಈ ಆರು ದಿನಗಳ ‘ಸಜೀಪ ದಸರಾ’ ಮಹೋತ್ಸವದಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸುಭಾಷ್ ಯುವಕ ಮಂಡಲ (ರಿ.) ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ, ಸುಭಾಷ್ ನಗರ, ಸಜೀಪಮೂಡ, ಬಂಟ್ವಾಳ ಇವರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.