ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘One Karnataka Mobility App’ ಅನ್ನು ಇಂದು ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ KSRTC AWATAR 2.0 ಆ್ಯಪ್ ಹಾಗೂ ಹೊಸ WhatsApp ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗೆ ಚಾಲನೆ ನೀಡಿದರು. ಈ ಆ್ಯಪ್‌ನಲ್ಲಿ KSRTC, NWKRTC, KKRTC ಮತ್ತು BMTC ಸಾರಿಗೆ ಸಂಸ್ಥೆಗಳ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪ್ರಯಾಣಿಕರು ಒಂದೇ ಲಾಗಿನ್ ಮೂಲಕ ಟಿಕೆಟ್ ಬುಕ್ಕಿಂಗ್, ಹಿಂದಿನ ಬುಕ್ಕಿಂಗ್ ವಿವರ, ವಹಿವಾಟು ನಿರ್ವಹಣೆ ಹಾಗೂ ದೂರುಗಳನ್ನು ದಾಖಲಿಸಿ ಅವುಗಳ ಸ್ಥಿತಿಯನ್ನು ಪರಿಶೀಲಿಸಬಹುದು. ಮುಂದಿನ ಹಂತದಲ್ಲಿ ಡಿಜಿಟಲ್ ಮಾಸಿಕ ಪಾಸ್‌ಗಳನ್ನು QR ಕೋಡ್ ಮೂಲಕ ಬಳಸುವ ವ್ಯವಸ್ಥೆಯನ್ನೂ ಪರಿಚಯಿಸಲಾಗುತ್ತದೆ.
ಇದರ ಜೊತೆಗೆ BMTC ಹೊರತುಪಡಿಸಿ ಉಳಿದ ಮೂರು ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ WhatsApp ಮೂಲಕವೂ ಟಿಕೆಟ್ ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು +91 6364940880 ಸಂಖ್ಯೆಗೆ WhatsApp ಮೂಲಕ ಸಂದೇಶ ಕಳುಹಿಸಿ ಮಾರ್ಗ, ದಿನಾಂಕ ಮತ್ತು ಬಸ್ ಆಯ್ಕೆ ಮಾಡಿ ಆನ್‌ಲೈನ್ ಪಾವತಿ ಮೂಲಕ ಟಿಕೆಟ್ ಪಡೆಯಬಹುದು. ಟಿಕೆಟ್ WhatsApp ಹಾಗೂ ಇ-ಮೇಲ್ ಮೂಲಕ ಲಭ್ಯವಾಗಲಿದೆ.
ಈ ಹೊಸ ವ್ಯವಸ್ಥೆಯ ಮೂಲಕ ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಡಿಜಿಟಲ್ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.





