ದೇವರಿಗೆ ನಾವೇನು ಕೊಡಲು ಸಾಧ್ಯ. ಆತ ಕೊಟ್ಟದನ್ನೇ ಆತನಿಗೆ ಮರಳಿ ನೀಡುತ್ತೇವೆ. ಈ ಜಗತ್ತು ಮತ್ತು ಇದರಲ್ಲಿ ಇರುವ ಪ್ರತಿಯೊಂದು ವಸ್ತುವೂ ಭಗವಂತನ ಪ್ರಸಾದ. ಆದರೂ ಭಗವದ್ಗೀತೆಯಲ್ಲಿ ನಾವು ದೇವರಿಗೆ ಏನನ್ನು ಸಮರ್ಪಿಸಿದರೆ ಪ್ರೀತಿಯಿಂದ ಭಗವಂತ ಸ್ವೀಕರಿಸುತ್ತಾನೆ ಎಂಬುವುದನ್ನು ತಿಳಿಸಿದ್ದಾರೆ.
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಚತಿl
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃll
ಯಾವನು ನನಗೆ ಎಲೆಯನ್ನಾಗಲೀ, ಹೂವನ್ನಾಗಲೀ, ಹಣ್ಣನ್ನಾಗಲೀ ಭಕ್ತಿಯಿಂದ ಕೊಡುವನೋ ಅಂತಹ ಶುದ್ಧ ಚಿತ್ತವುಳ್ಳವನು ಭಕ್ತಿಯಿಂದ ಸಮರ್ಪಿಸಿದ ಅದನ್ನು ನಾನು ಸ್ವೀಕರಿಸುತ್ತೇನೆ. ಇದು ಪರಮಾತ್ಮನೇ ಹೇಳಿದ ಮಾತು. ಹೂವು, ಹಣ್ಣು, ಹಂಪಲುಗಳು ದೇವರಿಗೆ ಬಹಳ ಇಷ್ಟವಾದ ಸಮರ್ಪಣೆಯಲ್ಲಿವೆ, ಭಕ್ತಿಯಿಂದ ಅರ್ಪಿಸಿದರೆ ಅದನ್ನು ಭಗವಂತ ಮೆಚ್ಚಿಕೊಳ್ಳುತ್ತಾರೆ.
ಪರಮಾತ್ಮನ ಮಾತಿನಂತೆ ಸಮರ್ಪಿಸುವ ವಸ್ತುವಾಗಲೀ, ಅದರ ಮೌಲ್ಯವಾಗಲೀ ಮುಖ್ಯವಲ್ಲ, ಬದಲಾಗಿ ಸಮರ್ಪಿಸುವಾಗಿನ ಭಕ್ತಿಭಾವ ಮುಖ್ಯ. ನೀನು ಯಾವುದನ್ನು ಮಾಡುತ್ತೀಯೋ, ಯಾವುದನ್ನು ತಿನ್ನುತ್ತೀಯೋ, ಯಾವುದನ್ನು ಹೋಮ ಮಾಡುತ್ತೀಯೋ, ಯಾವುದನ್ನು ದಾನ ಮಾಡುತ್ತೀಯೋ, ಅವೆಲ್ಲವನ್ನೂ ನನಗೆ ಸಮರ್ಪಿಸು ಎಂದು ಭಗವಂತ ಹೇಳುತ್ತಾನೆ.
ಭಕ್ತಿಯಿಂದ ಎಷ್ಟೇ ಚಿಕ್ಕ ವಸ್ತುವನ್ನು ಸಮರ್ಪಿಸಿದರೂ ಅದು ದೇವರಿಗೆ ಸಲ್ಲುತ್ತದೆ. ಕೋಳೂರ ಕೊಡಗೂಸಿನ ಕಥೆಯಲ್ಲಿ ಶಿವ ಪುಟ್ಟ ಬಾಲಕಿ ಸಮರ್ಪಿಸಿದ ಹಾಲನ್ನು ಸ್ವೀಕರಿಸುತ್ತಾನೆ. ರಾಮಾಯಣದ ಶಬರಿ ಕಚ್ಚಿ ನೀಡಿದ ಹಣ್ಣು ಶ್ರೀರಾಮನಿಗೆ ಪ್ರಿಯವಾಯಿತು. ವಿದುರನ ಮನೆಯ ಕುಡುತೆ ಹಾಲಿನಿಂದ ಶ್ರೀಕೃಷ್ಣ ತೃಪ್ತಿಪಟ್ಟ.
ಕಟ್ಟಪ್ಪನ ಮುಗ್ಧ ಭಕ್ತಿಯ ಸಮರ್ಪಣೆಗೆ ಶಿವ ಮೆಚ್ಚಿದ. ಕುಚೇಲನ ಮುಷ್ಟಿ ಅವಲಕ್ಕಿ ನವನೀತ ಚೋರನ ಹೊಟ್ಟೆತಣಿಸಿತು. ರಾತ್ರಿಯಿಡೀ ನಿರುದ್ದಿಶ್ಯವಾಗಿ ಕಿತ್ತು ಹಾಕುತ್ತಿದ್ದ ಬಿಲ್ವದೆಲೆಯಿಂದ ರುದ್ರ ಪ್ರಸನ್ನವಾದ. ಇಂತಹ ಅದೆಷ್ಟೋ ಕಥೆಗಳು ಪುರಾಣಗಳಲ್ಲಿ ಭಕ್ತಿಪೂರ್ವಕ ಸಮರ್ಪಣೆಯ ಮಹತ್ವವನ್ನು ತಿಳಿಸುತ್ತವೆ.