ಹುಟ್ಟು ಮತ್ತು ಸಾವು – ಈ ಎರಡರ ಮಧ್ಯೆ ಇರುವುದೇ ಬದುಕು. ಹುಟ್ಟು ಹಾಗೂ ಸಾವು ಎರಡೂ ವಿಧಿಯ ನಿಯಮಗಳು. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಾವು ಅನಿವಾರ್ಯ. ಆದರೆ ವ್ಯಕ್ತಿ ಸಾಯುವ ಕ್ಷಣದಲ್ಲಿ ಅವನು ಏನನ್ನು ಯೋಚಿಸುತ್ತಾನೆ? ಆ ಸಮಯದಲ್ಲಿ ಅವನ ಮೆದುಳಿನಲ್ಲಿ ಯಾವ ರೀತಿಯ ಭಾವನೆಗಳು ಉದ್ಭವಿಸುತ್ತವೆ? ಎಂಬುದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಇತ್ತೀಚೆಗೆ ಕೆಲವು ಮಹತ್ವದ ಅಧ್ಯಯನಗಳನ್ನು ನಡೆಸಿದ್ದಾರೆ.
ಇತ್ತೀಚೆಗೆ ವಿಜ್ಞಾನಿಗಳು ಎಲೆಕ್ಟ್ರೋ ಎನ್ಸೆಫಾಲೋಗ್ರಾಂ (EEG) ಸಾಧನವನ್ನು ಬಳಸಿಕೊಂಡು ಕೋಮಾವಸ್ಥೆಯಲ್ಲಿದ್ದ ವ್ಯಕ್ತಿಯ ಮೆದುಳನ್ನು ಪರಿಶೀಲಿಸಿದರು. ಆ ಸಂದರ್ಭದಲ್ಲಿ ಸಾವಿನ ಕೊನೆಯ ಕ್ಷಣಗಳಲ್ಲಿ ಮೆದುಳಿನಲ್ಲಿ ನಡೆಯುವ ಅಚ್ಚರಿಯ ಚಟುವಟಿಕೆಗಳನ್ನು ಈ ಸಾಧನದ ಮೂಲಕ ಅವರು ಗಮನಿಸಿದ್ದಾರೆ.
ಈ ಅಧ್ಯಯನದಲ್ಲಿ ಕಂಡುಬಂದ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಸಾವಿಗೆ ಕೆಲವು ಕ್ಷಣಗಳ ಮೊದಲು ವ್ಯಕ್ತಿಯ ಮೆದುಳು ಹಳೆಯ ನೆನಪುಗಳನ್ನು ಹಾಗೂ ತನ್ನ ಜೀವನದಲ್ಲಿ ಅನುಭವಿಸಿದ ಸಂತೋಷದ ಕ್ಷಣಗಳನ್ನು ಮರುಕಳಿಸುತ್ತದೆ ಎಂಬುದು. ವಿಜ್ಞಾನಿಗಳ ಪ್ರಕಾರ, ವ್ಯಕ್ತಿಯ ಕೊನೆಯ ಕ್ಷಣದಲ್ಲಿ ಗಾಮಾ ಅಲೆಗಳು (Gamma waves) ಎಂಬ ವಿಶೇಷ ಮೆದುಳಿನ ತರಂಗಗಳು ಉತ್ಪತ್ತಿಯಾಗುತ್ತವೆ. ಸಾಮಾನ್ಯವಾಗಿ ಮನುಷ್ಯ ಕನಸು ಕಾಣುವಾಗ, ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳುವಾಗ ಅಥವಾ ತೀವ್ರ ಭಾವನಾತ್ಮಕ ಸ್ಥಿತಿಯಲ್ಲಿರುವಾಗ ಇಂತಹ ಗಾಮಾ ಅಲೆಗಳು ಮೆದುಳಿನಲ್ಲಿ ಕಂಡುಬರುತ್ತವೆ.
ಹೃದಯ ಬಡಿತ ನಿಂತ ಬಳಿಕವೂ, ಮೆದುಳು ಕೆಲ ಕ್ಷಣಗಳ ಕಾಲ ಹೆಚ್ಚು ಸಕ್ರಿಯವಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆ ಕ್ಷಣಗಳಲ್ಲಿ ವ್ಯಕ್ತಿ ತನ್ನ ಜೀವನದ ಅತ್ಯಂತ ಸಂತೋಷದ ನೆನಪುಗಳನ್ನು ಅನುಭವಿಸುತ್ತಾನೆ. ಇದರಿಂದ ಆತನ ಮನಸ್ಸು ಸಂತೋಷ ಮತ್ತು ಶಾಂತಿಯಿಂದ ತುಂಬಿರುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಅತ್ಯಂತ ಕಡಿಮೆ ಸಮಯದಲ್ಲಿ ನಡೆಯುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಅಧ್ಯಯನದಿಂದ ಹೊರಬಂದ ಪ್ರಮುಖ ಅಂಶವೆಂದರೆ, ಸಾಯುವ ಕ್ಷಣದಲ್ಲಿ ವ್ಯಕ್ತಿ ತೀವ್ರ ನೋವು ಮತ್ತು ಕಷ್ಟ ಅನುಭವಿಸುತ್ತಾನೆ ಎಂಬ ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ, ಅವನು ಶಾಂತಿ ಮತ್ತು ನೆಮ್ಮದಿಯೊಂದಿಗೆ ಈ ಲೋಕವನ್ನು ತ್ಯಜಿಸುತ್ತಾನೆ ಎಂಬ ಸತ್ಯ.





