25 February 2026 | Join group

ಬೆಳಿಗ್ಗೆ 4 ಗಂಟೆಗೆ ಸಾಲಿನಲ್ಲಿ ನಿಂತು ಖರೀದಿಸುವ ಮೈಸೂರು ಸಿಲ್ಕ್‌ಗೆ ಸಂಕಟ! ಟಿ. ನರಸೀಪುರ ಘಟಕ ಮುಚ್ಚುವ ಭೀತಿ

  • 24 Feb 2026 08:02:13 PM

ಮೈಸೂರು ಸಿಲ್ಕ್ ಅಂದರೆ ಮೈಸೂರು ರೇಷ್ಮೆ. ದೇಶದಲ್ಲೇ ಅತ್ಯಂತ ಹಳೆಯದು ಮತ್ತು ಹೆಸರಾಂತ ರೇಷ್ಮೆ ಸೀರೆ ತಯಾರಿಕಾ ಸಂಸ್ಥೆಯೇ ಮೈಸೂರು ಸಿಲ್ಕ್. ಬೆಳಿಗ್ಗಿನ ಜಾವಾ 4 ರಿಂದ ಕ್ಯೂ ನಲ್ಲಿ ನಿಂತು ಮಹಿಳೆಯರು ರೂ.19 ಸಾವಿರದಿಂದ ಹಿಡಿದು ರೂ. 2.5 ಲಕ್ಷ ಕೊಟ್ಟು ಮೈಸೂರ್ ಸಿಲ್ಕ್ ಸೀರೆ ಖರೀದಿಸುವುದನ್ನು ಕಾಣಬಹುದಾಗಿದೆ.

 

1912ರಲ್ಲಿ ನಾಲ್ವರು ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಈ ರೇಷ್ಮೆ ಉದ್ಯಮಕ್ಕೆ ಅಡಿಪಾಯ ಹಾಕಲಾಯಿತು. ತಲಕಾಡು ಮತ್ತು ಟಿ. ನರಸೀಪುರದಲ್ಲಿ ಕಾವೇರಿ ಹಾಗೂ ಕಪಿಲಾ ನದಿಗಳ ಸಂಗಮದ ನೀರನ್ನು ಬಳಸಿಕೊಂಡು ರೇಷ್ಮೆ ನೂಲು ತಯಾರಿಕಾ ಘಟಕವನ್ನು ಸ್ಥಾಪಿಸಲಾಯಿತು.

 

ಟಿ. ನರಸೀಪುರದಲ್ಲಿ ರೇಷ್ಮೆ ನೂಲು ತಯಾರಿಸಿ, ಅದನ್ನು ಮೈಸೂರು ಮತ್ತು ಚನ್ನಪಟ್ಟಣಕ್ಕೆ ಕಳುಹಿಸಲಾಗುತ್ತಿತ್ತು. ಅಲ್ಲಿ ರೇಷ್ಮೆ ಸೀರೆಯನ್ನು ಹೆಣೆದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿತ್ತು. ಮೈಸೂರು ಸಿಲ್ಕ್ ಸೀರೆಗಳು ತಮ್ಮ ಮೆರುಗು ಮತ್ತು ಗುಣಮಟ್ಟದಿಂದ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿವೆ.

 

ಆದರೆ ಈಗ ಟಿ. ನರಸೀಪುರದಲ್ಲಿರುವ ರೇಷ್ಮೆ ಫ್ಯಾಕ್ಟರಿಯನ್ನು ಮುಚ್ಚುವ ನಿರ್ಧಾರ ಸರ್ಕಾರ ಕೈಗೊಂಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

 

ಈ ನಿರ್ಧಾರ ಜಾರಿಯಾದರೆ, ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸಬೇಕಾಗಿದೆ.

 

ಫ್ಯಾಕ್ಟರಿ ಮುಚ್ಚಬಾರದು ಎಂದು ವಿವಿಧ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಮೈಸೂರು ಸಿಲ್ಕ್ ಎಂಬ ಐತಿಹಾಸಿಕ ಹೆಸರು ಕೇವಲ ಪುಸ್ತಕದ ಪುಟಗಳಿಗೆ ಸೀಮಿತವಾಗಬಾರದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.