08 March 2026 | Join group

ಯುಎಇಯಲ್ಲಿ ಆಹಾರ ಕೊರತೆ ತಪ್ಪಿಸಲು ಲುಲು ಗ್ರೂಪ್ (Lulu Group) ಕಾರ್ಯಪ್ರವೃತ್ತ: ವಿಶೇಷ ಕಾರ್ಗೋ ವಿಮಾನಗಳಲ್ಲಿ ಭಾರತದಿಂದ ತಾಜಾ ಸರಕು

  • 07 Mar 2026 03:46:57 PM

ಅಬುಧಾಬಿ: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಯುಎಇಯಲ್ಲಿ ತಾಜಾ ಆಹಾರ ಸರಬರಾಜು ಅಡಚಣೆ ಆಗದಂತೆ ನೋಡಿಕೊಳ್ಳಲು ಲುಲು ಗ್ರೂಪ್ (Lulu Group) ವಿಶೇಷ ಕ್ರಮ ಕೈಗೊಂಡಿದೆ. ತನ್ನ ಸೂಪರ್‌ಮಾರ್ಕೆಟ್‌ಗಳಲ್ಲಿ ಸರಕುಗಳ ಲಭ್ಯತೆ ನಿರಂತರವಾಗಿರಲು ವಿಶೇಷ ಚಾರ್ಟರ್ ಕಾರ್ಗೋ ವಿಮಾನಗಳ ಮೂಲಕ ತಾಜಾ ಆಹಾರ ಸಾಮಗ್ರಿಗಳನ್ನು ಯುಎಇಗೆ ತರಿಸಲಾಗುತ್ತಿದೆ.

 

ಇತ್ತೀಚೆಗೆ ಎತಿಹಾದ್ ಏರ್‌ವೇಸ್‌ನ ಕಾರ್ಗೋ ಫ್ರೈಟರ್ ವಿಮಾನದ ಮೂಲಕ ಭಾರತದಿಂದ ಸುಮಾರು 12,000 ಪ್ಯಾಕೆಟ್‌ಗಳ ತಾಜಾ ಹಣ್ಣು-ತರಕಾರಿಗಳನ್ನು ಅಬುಧಾಬಿಗೆ ಸಾಗಿಸಲಾಗಿದೆ. ಒಟ್ಟು ಸುಮಾರು 80,000 ಕಿಲೋಗ್ರಾಂ ತೂಕದ ಈ ಸರಕು ಯುಎಇಗೆ ತಲುಪಿದ್ದು, ವಿವಿಧ ಲುಲು ಮಾಲ್ ಗಳಿಗೆ ವಿತರಿಸಲಾಗಿದೆ.

 

ಇದಕ್ಕೂ ಮುನ್ನ ದೆಹಲಿ ನಗರದಿಂದ ಸುಮಾರು 80 ಟನ್ ಮಾಂಸವನ್ನು ಕೂಡ ಯುಎಇಗೆ ತರಲಾಗಿದೆ. ಇದರ ಜೊತೆಗೆ ಮುಂಬೈ ಮತ್ತು ಬೆಂಗಳೂರು ನಗರಗಳಿಂದಲೂ ಹೆಚ್ಚುವರಿ ಸರಕುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಸೇರಿದಂತೆ ಇತರೆ ದೇಶಗಳಿಂದಲೂ ಆಹಾರ ಸರಕುಗಳನ್ನು ಸಂಗ್ರಹಿಸುವ ಕ್ರಮ ಕೈಗೊಳ್ಳಲಾಗಿದೆ.

 

ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಕಾರ್ಗೋ ವಿಮಾನಗಳ ಮೂಲಕ ತಾಜಾ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಯುಎಇಗೆ ತರಲಾಗುವುದು ಎಂದು ಲುಲು ಗ್ರೂಪ್ ತಿಳಿಸಿದೆ. ಇದರಿಂದ ಯುಎಇಯಲ್ಲಿರುವ ಗ್ರಾಹಕರಿಗೆ ಸೂಪರ್‌ಮಾರ್ಕೆಟ್‌ಗಳಲ್ಲಿ ಅಗತ್ಯ ಆಹಾರ ಪದಾರ್ಥಗಳ ಲಭ್ಯತೆ ನಿರಂತರವಾಗಿರಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.