ದುಬೈಯಲ್ಲಿ ವಾಸಿಸುವ ವಲಸಿಗರಿಗೆ ವಸತಿಗೆ ಸಂಬಂಧಪಟ್ಟ ವಿಚಾರದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ನಿಯಮಗಳನ್ನು ಉಲ್ಲಂಘಿಸುವವರಿಗೆ ಬಹಳ ದೊಡ್ಡ ಮೊತ್ತದ ದಂಡ ವಿಧಿಸುವಾಗ ಬಗ್ಗೆ ಎಚ್ಚರ ನೀಡಿದ್ದಾರೆ.
ದುಬೈ ಮುನ್ಸಿಪಾಲಿಟಿಯಿಂದ ನಿರ್ದಿಷ್ಟ ಪರವಾನಗಿ ಅಥವಾ ಅನುಮತಿಯಿಲ್ಲದೆ ಯಾವುದೇ ಕಟ್ಟಡವನ್ನು 'ಹಂಚಿಕೆಯ ವಸತಿ' ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ. ಫ್ಲಾಟ್ ಅಥವಾ ವಿಲ್ಲಾದಲ್ಲಿ ವಾಸಿಸುವ ಪ್ರತಿಯೊಬ್ಬರ ವಿವರಗಳನ್ನು ದುಬೈ ಭೂ ಇಲಾಖೆಯ ವ್ಯವಸ್ಥೆಯಲ್ಲಿ ನಿಖರವಾಗಿ ದಾಖಲಿಸಬೇಕು ಎಂದು ತಿಳಿಸಲಾಗಿದೆ.
ಕಾನೂನು ಉಲ್ಲಂಘಿಸಿದಲ್ಲಿ 500 ದಿರ್ಹಮ್ ಗಳಿಂದ ಹಿಡಿದು 1 ಮಿಲಿಯನ್ ದಿರ್ಹಮ್‌ಗಳವರೆಗೆ (ರೂ. 2.5 ಕೋಟಿ) ದಂಡ ವಿಧಿಸುವ ಆದೇಶವನ್ನು ಹೊರಡಿಸಿದ್ದಾರೆ. ಈ ಮೂಲಕ ಬಹು ಕುಟುಂಬಗಳು, ಅಥವಾ ಬ್ಯಾಚುಲರ್‌ಗಳು ಮತ್ತು ಕುಟುಂಬಗಳು ಒಂದೇ ಫ್ಲಾಟ್‌ನಲ್ಲಿ ವಾಸಿಸುವುದನ್ನು ನಿರ್ಬಂಧಗೊಳಿಸಿದೆ.
ಫ್ಲಾಟ್ ಮಾಲೀಕರ ಲಿಖಿತ ಅನುಮತಿಯಿಲ್ಲದೆ ಬಾಡಿಗೆದಾರರು ಕೊಠಡಿಗಳು ಅಥವಾ ಹಾಸಿಗೆ ಜಾಗವನ್ನು ಇನ್ನೊಬ್ಬ ವ್ಯಕ್ತಿಗೆ ಬಾಡಿಗೆಗೆ ನೀಡುವುದು ಅಪರಾಧ. ಒಂದು ಕೋಣೆಯಲ್ಲಿ ನಿರ್ದಿಷ್ಟ ಸಂಖ್ಯೆಯ ಜನರು ವಾಸಿಸಬಾರದು. ಸಾಕಷ್ಟು ಗಾಳಿ ಮತ್ತು ಭದ್ರತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು.
ಕಾನೂನು ಉಲ್ಲಂಘಿಸುವವರಿಗೆ ಮೊದಲ ಹಂತದಲ್ಲಿ ಅಪರಾಧದ ತೀವ್ರತೆಯನ್ನು ಅವಲಂಬಿಸಿ 500 ದಿರ್ಹಮ್‌ನಿಂದ 500,000 ದಿರ್ಹಮ್‌ಗಳವರೆಗೆ ದಂಡ ವಿಧಿಸಲಾಗುತ್ತದೆ. ಒಂದು ವರ್ಷದೊಳಗೆ ಉಲ್ಲಂಘನೆ ಪುನರಾವರ್ತನೆಯಾದರೆ, ದಂಡವು 1 ಮಿಲಿಯನ್ ದಿರ್ಹಮ್‌ಗಳಿಗೆ ಹೆಚ್ಚಾಗುತ್ತದೆ.
ಫ್ಲಾಟ್‌ಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಸುರಕ್ಷಿತ ಜೀವನವನ್ನು ಖಚಿತಪಡಿಸುವ ಸಲುವಾಗಿ ಈ ಕ್ರಮವನ್ನು ಸರಕಾರ ಜಾರಿಗೊಳಿಸಿದೆ. ಪ್ರಸ್ತುತ, ಈ ರೀತಿಯಾಗಿ ವಾಸಿಸುವವರಿಗೆ ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ ಮತ್ತು ಈ ಕಾನೂನು ಕಟ್ಟಡ ಮಾಲೀಕರು, ಬಾಡಿಗೆದಾರರು ಮತ್ತು ರಿಯಲ್ ಎಸ್ಟೇಟ್ ವ್ಯವಸ್ಥಾಪಕರಿಗೆ ಅನ್ವಯಿಸುತ್ತದೆ.





