ಕುವೈತ್: ಇಸ್ರೇಲ್ ಇತ್ತೀಚೆಗೆ ಇರಾನ್‌ನ ವಿಶ್ವದ ಅತಿದೊಡ್ಡ South Pars ನೈಸರ್ಗಿಕ ಅನಿಲ ಕ್ಷೇತ್ರದ ಮೇಲೆ ದಾಳಿ ನಡೆಸಿದ ನಂತರ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ.
ಈ ದಾಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ಪ್ರದೇಶದ ಹಲವು ದೇಶಗಳ ಎನರ್ಜಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.
ಕುವೈತ್‌ನಲ್ಲಿ ಮಿನಾ ಅಲ್-ಅಹ್ಮದಿ ಹಾಗೂ ಮಿನಾ ಅಬ್ದುಲ್ಲಾ ತೈಲ ಸಂಸ್ಕರಣಾಗಾರಗಳ ಮೇಲೆ ಡ್ರೋನ್ ದಾಳಿ ನಡೆದಿದ್ದು, ಕೆಲವು ಘಟಕಗಳಲ್ಲಿ ಸಣ್ಣ ಮಟ್ಟಿನ ಬೆಂಕಿ ಕಾಣಿಸಿಕೊಂಡಿದೆ. ಅಧಿಕಾರಿಗಳ ಪ್ರಕಾರ, ತುರ್ತು ತಂಡಗಳು ತಕ್ಷಣವೇ ಕಾರ್ಯಪ್ರವೃತ್ತಿಯಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ದಾಳಿಗಳ ಹಿನ್ನೆಲೆ ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಉಂಟಾಗಿದ್ದು, ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ತಜ್ಞರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಈ ಸಂಘರ್ಷವು ಮುಂದಿನ ದಿನಗಳಲ್ಲಿ ಜಾಗತಿಕ ಆರ್ಥಿಕತೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.





