ಜಾಗತಿಕ ಮಟ್ಟದಲ್ಲಿ ಹರಡುತ್ತಿರುವ ಹೊಸ ಕೋವಿಡ್ ರೂಪಾಂತರ 'ಸಿಕಾಡಾ' (BA.3.2)

  • 29 Mar 2026 02:42:12 PM

ಕೊವಿಡ್-19 ವೈರಸ್‌ನ ಹೊಸ ರೂಪಾಂತರವಾದ BA.3.2, ಅನೌಪಚಾರಿಕವಾಗಿ “ಸಿಕಾಡಾ” (Cicada) ಎಂದು ಕರೆಯಲ್ಪಡುವುದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಈ ರೂಪಾಂತರವನ್ನು ಮೊದಲು 2024ರ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕದಲ್ಲಿ ಪತ್ತೆ ಹಚ್ಚಲಾಗಿದ್ದು, ಈಗ ಇದು ಅಮೇರಿಕಾದ ಹಲವು ರಾಜ್ಯಗಳು ಸೇರಿದಂತೆ ಕನಿಷ್ಠ 23ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ.

ಅಮೇರಿಕಾದಲ್ಲಿ ಈ ರೂಪಾಂತರವು ಪ್ರಯಾಣಿಕರ ಮಾದರಿಗಳು, ರೋಗಿಗಳ ಪರೀಕ್ಷೆಗಳು ಮತ್ತು ವಾಯುಮಲಿನ್ಯ ಪರಿಶೀಲನೆಗಳಲ್ಲಿ ಕೂಡ ಪತ್ತೆಯಾಗಿದೆ, ಇದರಿಂದ ಇದರ ಹರಡುವಿಕೆ ನಿಧಾನವಾಗಿ ಹೆಚ್ಚುತ್ತಿದೆ ಎಂಬುದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ.

ಹೊಸ ರೂಪಾಂತರದ ವಿಶೇಷತೆಯೇನು?

BA.3.2 ಒಂದು ಒಮಿಕ್ರಾನ್ ಕುಟುಂಬದ ಉಪರೂಪಾಂತರ (subvariant) ಆಗಿದೆ. ಇದರಲ್ಲಿ ಸುಮಾರು 70ಕ್ಕಿಂತ ಹೆಚ್ಚು ಮ್ಯೂಟೇಶನ್‌ಗಳು (mutations) ಇರುವುದರಿಂದ, ಇದು ಹಿಂದಿನ ರೂಪಾಂತರಗಳಿಗಿಂತ ವಿಭಿನ್ನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮ್ಯೂಟೇಶನ್‌ಗಳು ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿಸಬಹುದು ಎಂದು ಕೂಡ ವಿಜ್ಞಾನಿಗಳು ಹೇಳುತ್ತಿದ್ದಾರೆ. 

 

ಇದು ಅಪಾಯಕಾರಿಯೇ?

ಪ್ರಸ್ತುತ ಜಾಗತಿಕ ಆರೋಗ್ಯ ಸಂಸ್ಥೆಗಳು BA.3.2 ಅನ್ನು “Variant Under Monitoring” (ನಿಗಾವಹಿಸಲಾಗುತ್ತಿರುವ ರೂಪಾಂತರ) ಎಂದು ವರ್ಗೀಕರಿಸಿವೆ. ಅಂದರೆ, ಇದು ಇನ್ನೂ ದೊಡ್ಡ ಮಟ್ಟದ ಅಪಾಯ ಎಂದು ಪರಿಗಣಿಸಲ್ಪಟ್ಟಿಲ್ಲ. ಆದರೆ ನಿಗಾ ಅಗತ್ಯವಿದೆ ಎಂದು ತಜ್ಞರು ಹೇಳುತ್ತಿದ್ದಾರೆ. 

 

ಲಕ್ಷಣಗಳು (Symptoms):

ಈ ರೂಪಾಂತರದ ಲಕ್ಷಣಗಳು ಹಿಂದಿನ ಕೋವಿಡ್ ಲಕ್ಷಣಗಳಂತೆಯೇ ಇವೆ:

ಗಂಟಲು ನೋವು (severe sore throat ಮುಖ್ಯ ಲಕ್ಷಣ), ಜ್ವರ ಮತ್ತು ಚಳಿ, ಒಣ ಕೆಮ್ಮು, ದೇಹದ ದೌರ್ಬಲ್ಯ, ಮೂಗು ಮುಚ್ಚಿಕೊಳ್ಳುವುದು ಅಥವಾ ನೀರು ಬರುವುದು, ಕೆಲವೊಮ್ಮೆ ಉಸಿರಾಟದಲ್ಲಿ ತೊಂದರೆ ಇತ್ಯಾದಿ.

 

ತಜ್ಞರ ಎಚ್ಚರಿಕೆ

ತಜ್ಞರ ಪ್ರಕಾರ, ಈ ರೂಪಾಂತರವು ವೇಗವಾಗಿ ಹರಡುವ ಸಾಧ್ಯತೆ ಇದೆ. ಹಿಂದಿನ ಸೋಂಕು ಅಥವಾ ಲಸಿಕೆ ಪಡೆದವರಲ್ಲೂ ಪುನಃ ಸೋಂಕು (reinfection) ಉಂಟಾಗಬಹುದು. ಆದರೆ ಈಗಿನ ತನಕ ಗಂಭೀರತೆ (severity) ಹೆಚ್ಚಾಗಿದೆ ಎಂಬ ಸಾಕ್ಷ್ಯ ಇಲ್ಲ. 

 

“ಸಿಕಾಡಾ” (BA.3.2) ಹೊಸ ಕೋವಿಡ್ ರೂಪಾಂತರ ಈಗಾಗಲೇ 20 ಕ್ಕಿಂತ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿವೆ. ಹೆಚ್ಚು ಮ್ಯೂಟೇಶನ್‌ಗಳು ಇದ್ದರೂ, ಇದೀಗ ದೊಡ್ಡ ಆತಂಕದ ಕಾರಣವಲ್ಲ, ಆದರೆ ಗಮನ ಅಗತ್ಯ ಎನ್ನಲಾಗಿದೆ.