ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರು ನಿತಿನ್ ಗಡ್ಕರಿ ನೇತೃತ್ವದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶದ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ಸಿದ್ಧತೆ ನಡೆಸಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಹೊಸ ಟೋಲ್ ವ್ಯವಸ್ಥೆ ಮೂಲಕ ವಾಹನದ ನಂಬರ್ ಪ್ಲೇಟ್ ಫೋಟೋ ತೆಗೆದು, ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಗಣನೆ ಮಾಡಿ, ಟೋಲ್ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಹೇಗೆ ಕೆಲಸ ಮಾಡಲಿದೆ ಈ ವ್ಯವಸ್ಥೆ?
ಹೆದ್ದಾರಿಗಳಲ್ಲಿ ಅಳವಡಿಸಲಾದ ಹೈ-ಸ್ಪೀಡ್ ಕ್ಯಾಮೆರಾಗಳು ವಾಹನದ ನಂಬರ್ ಪ್ಲೇಟ್ ಅನ್ನು ಗುರುತಿಸಲಿವೆ.
AI ತಂತ್ರಜ್ಞಾನ ವಾಹನದ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ಗಳನ್ನು ಲೆಕ್ಕ ಹಾಕಲಿದೆ.
ಪ್ರಯಾಣಿಸಿದ ದೂರದ ಆಧಾರದ ಮೇಲೆ ಟೋಲ್ ಮೊತ್ತವನ್ನು ಲೆಕ್ಕಿಸಿ, ಸಂಬಂಧಿತ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತ ಮಾಡಲಾಗುತ್ತದೆ.
ಟೋಲ್ ಪ್ಲಾಜಾಗಳಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ — ಸಂಪೂರ್ಣ ಬ್ಯಾರಿಯರ್-ಫ್ರೀ ವ್ಯವಸ್ಥೆ ಜಾರಿಗೆ ಬರಲಿದೆ.
ಟೋಲ್ ಸಂಗ್ರಹದಲ್ಲಿ ಭಾರೀ ಏರಿಕೆ ನಿರೀಕ್ಷೆ
ಪ್ರಸ್ತುತ ದೇಶದ ವಾರ್ಷಿಕ ಟೋಲ್ ಸಂಗ್ರಹವು ಸುಮಾರು ₹85,000 ಕೋಟಿ ಇದೆ. ಆದರೆ ಮುಂದಿನ ವರ್ಷಗಳಲ್ಲಿ ಇದು ₹3.5–4 ಟ್ರಿಲಿಯನ್ ಮಟ್ಟಕ್ಕೆ ಏರಬಹುದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಹೆದ್ದಾರಿ ವಿಸ್ತರಣೆ, ವಾಹನಗಳ ಸಂಖ್ಯೆ ಹೆಚ್ಚಳ ಹಾಗೂ ಡಿಜಿಟಲ್ ಸಂಗ್ರಹ ವ್ಯವಸ್ಥೆಯ ಪರಿಣಾಮವಾಗಿ ಆದಾಯದಲ್ಲಿ ಭಾರೀ ಏರಿಕೆ ಸಾಧ್ಯವೆಂದು ಅಂದಾಜಿಸಲಾಗಿದೆ.
ತಂತ್ರಜ್ಞಾನ ಉತ್ತಮವಾದರೂ, ಕೆಲವು ಗಂಭೀರ ಪ್ರಶ್ನೆಗಳು ಎದುರಾಗುತ್ತಿವೆ. ನಂಬರ್ ಪ್ಲೇಟ್ ಕಳವು ಅಥವಾ ಕ್ಲೋನ್ ಮಾಡಿದರೆ ಏನು? ತಪ್ಪಾಗಿ ಓದಿದರೆ ಅಥವಾ ತಪ್ಪು ವಾಹನಕ್ಕೆ ಹಣ ಕಡಿತವಾದರೆ ಹೊಣೆ ಯಾರು?ಬ್ಯಾಂಕ್‌ಗಳಾ? ವಾಹನ ಮಾಲೀಕರ? ಅಥವಾ ಸರ್ಕಾರವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಡಿಜಿಟಲ್ ಹೆದ್ದಾರಿಗಳತ್ತ ಭಾರತ
FASTag ಬಳಿಕ ಇದೀಗ AI ಆಧಾರಿತ ಸಂಪೂರ್ಣ ಡಿಜಿಟಲ್ ಟೋಲ್ ವ್ಯವಸ್ಥೆ ಜಾರಿಗೆ ಬಂದರೆ, ಇದು ದೇಶದ ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಕ್ರಾಂತಿಯಾಗಿದೆ. ಆದರೆ ತಂತ್ರಜ್ಞಾನ ಜೊತೆಗೆ ಭದ್ರತೆ ಮತ್ತು ಜವಾಬ್ದಾರಿತ್ವದ ವ್ಯವಸ್ಥೆಯೂ ಸಮಾನವಾಗಿ ಬಲವಾಗಿರಬೇಕೆಂಬುದು ಜನರ ಬೇಡಿಕೆಯಾಗಿದೆ.





