ಒಮ್ಮೆ ಎಲ್ಲರ ಕೈಯಲ್ಲಿದ್ದ ನೋಕಿಯಾ… ಇಂದು ಇಂಟರ್ನೆಟ್‌ನ ಬೆನ್ನೆಲುಬು!

  • 09 Apr 2026 12:13:51 AM

ಕೆಲ ವರ್ಷಗಳ ಹಿಂದೆ ಪ್ರತಿಯೊಬ್ಬರ ಜೇಬಿನಲ್ಲಿ ಒಂದೇ ಒಂದು ಫೋನ್ ಇತ್ತು ಅದೇ ನೋಕಿಯಾ. ಹಾವಿನ ಆಟ, ಆ ಐಕಾನಿಕ್ ರಿಂಗ್ಟೋನ್, ಮೂರು ಮಹಡಿಯಿಂದ ಬಿದ್ದರೂ ಏನೂ ಆಗದ “ಬ್ರಿಕ್ ಫೋನ್” ಇವೆಲ್ಲವೂ ಒಂದು ಪೀಳಿಗೆಯ ನೆನಪಿನ ಅಧ್ಯಾಯವಾಗಿದೆ.

 

ಸ್ಮಾರ್ಟ್‌ಫೋನ್ ಯುಗ ಶುರುವಾದಾಗ ನೋಕಿಯಾ ಕಾಣೆಯಾಯಿತು ಎನ್ನುವ ಭಾವನೆ ಎಲ್ಲರಲ್ಲೂ ಮೂಡಿತ್ತು. ಆಪಲ್, ಸ್ಯಾಮ್ಸಂಗ್ ಮಾರುಕಟ್ಟೆ ಹಿಡಿದ ನಂತರ “ನೋಕಿಯಾ ಮುಗಿದಿತು” ಎಂದು ಹಲವರು ನಿರ್ಧರಿಸಿದರು. ಆದರೆ ನಿಜವಾಗಿಯೂ ಮುಗಿದಿತೇ?

 

ಕಂಪನಿ ಸತ್ತು ಹೋಗಲಿಲ್ಲ… ರೂಪ ಬದಲಿಸಿತು. ನೋಕಿಯಾ ಮೊಬೈಲ್ ತಯಾರಿಕೆಯಿಂದ ಹಿಂದೆ ಸರಿದರೂ, ಸಂಪೂರ್ಣವಾಗಿ ಹೊಸ ದಾರಿಗೆ ತಿರುಗಿತು. ಇಂದು ನೋಕಿಯಾ ಏನು ಮಾಡುತ್ತಿದೆ ಗೊತ್ತೇ? ಅದು 5G ನೆಟ್‌ವರ್ಕ್ ಮೂಲಸೌಕರ್ಯ ಒದಗಿಸುತ್ತಿದೆ ಹಾಗೂ ಫೈಬರ್ ಆಪ್ಟಿಕ್ ವ್ಯವಸ್ಥೆಗಳನ್ನು ಒದಗಿಸುವ ಕಂಪನಿಯಾಗಿ ಬೆಳೆದಿದೆ. ಅದರ ಜೊತೆಗೆ ಡೇಟಾ ಸೆಂಟರ್ ನೆಟ್‌ವರ್ಕಿಂಗ್, ಕ್ಲೌಡ್ ತಂತ್ರಜ್ಞಾನ ಮತ್ತು 6G ಸಂಶೋಧನೆಯಲ್ಲಿ ತೊಡಗಿಕೊಂಡಿದೆ.

 

ಇಂದಿನ ನೋಕಿಯಾ ಫೋನ್ ಮಾರುವುದಿಲ್ಲ. ಫೋನ್ ಕೆಲಸ ಮಾಡಲು ಬೇಕಾದ ನೆಟ್‌ವರ್ಕ್ ಮೂಲಸೌಕರ್ಯವನ್ನು ನಿರ್ಮಿಸುತ್ತದೆ. ಅಂದರೆ, ಮೊಬೈಲ್ ಕೈಯಲ್ಲಿ ಇಲ್ಲದಿದ್ದರೂ, ಇಂಟರ್ನೆಟ್ ಹಿನ್ನಲೆಯಲ್ಲಿ ಅದು ಜೀವಂತವಾಗಿದೆ.

 

ಎನ್‌ವಿಡಿಯಾ (Nvidia) ಹೂಡಿಕೆ

ಇತ್ತೀಚೆಗೆ ಅಮೆರಿಕಾದ ಚಿಪ್ ದಿಗ್ಗಜ ಸಂಸ್ಥೆ ಎನ್‌ವಿಡಿಯಾ (Nvidia) ಸುಮಾರು 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ನೋಕಿಯಾದಲ್ಲಿ ಸುಮಾರು 2.9% ಪಾಲು ಪಡೆದಿದೆ ಎಂಬ ಮಾಹಿತಿ ಹೊರಬಂದಿದೆ. ಭವಿಷ್ಯದ 5G, 6G ಮತ್ತು AI ಆಧಾರಿತ ನೆಟ್‌ವರ್ಕ್‌ಗಳಲ್ಲಿ ನೋಕಿಯಾ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ಎನ್‌ವಿಡಿಯಾ ಕಂಪನಿ ವ್ಯಕ್ತಪಡಿಸಿದೆ.

 

ಒಮ್ಮೆ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದ್ದ ಕಂಪನಿ ಕೆಳಗೆ ಬಿದ್ದಿತು. ಆದರೆ ಅದು ಅಳಿದು ಹೋಗಲಿಲ್ಲ. ಅದು ಹೊಸ ಕ್ಷೇತ್ರದಲ್ಲಿ ತನ್ನನ್ನು ತಾನೇ ಮರುಹುಟ್ಟು ಪಡೆದಿತು. ಇಂದಿನ ಯುವ ಉದ್ಯಮಿಗಳಿಗೆ, ಸ್ಟಾರ್ಟ್‌ಅಪ್ ಸ್ಥಾಪಕರಿಗೆ ಮತ್ತು ಜೀವನದಲ್ಲಿ ಹಿನ್ನಡೆಯನ್ನು ಎದುರಿಸುವವರಿಗೆ ನೋಕಿಯಾ ಒಂದು ಜೀವಂತ ಉದಾಹರಣೆಯಾಗಿದೆ