ಬ್ರಹ್ಮಾವರ ಸಮೀಪದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬುಧವಾರ (ಏ. 8, 2026) 24ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 36 ಜೋಡಿಗಳು ದೇವಿಯ ಸನ್ನಿಧಿಯಲ್ಲಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವೇದಮಂತ್ರಗಳ ಘೋಷ ಮತ್ತು ಮಂಗಳವಾದ್ಯಗಳ ನಡುವೆ ನಡೆದ ಈ ವಿವಾಹ ಮಹೋತ್ಸವದಲ್ಲಿ ನೂರಾರು ಭಕ್ತರು ಹಾಗೂ ಕುಟುಂಬಸ್ಥರು ಭಾಗವಹಿಸಿ ವರ-ವಧುಗಳಿಗೆ ಆಶೀರ್ವಾದ ನೀಡಿದರು. ಸಮಾಜದಲ್ಲಿ ಸರಳ ವಿವಾಹವನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಾಮೂಹಿಕ ವಿವಾಹವನ್ನು ಪ್ರತಿವರ್ಷವೂ ದೇವಸ್ಥಾನದ ವತಿಯಿಂದ ಆಯೋಜಿಸಲಾಗುತ್ತಿದೆ.
ಈ ಸಂದರ್ಭ ಮಧುವಿಗೆ ಕರಿಮಣಿ ಸರ, ಧಾರೆ ಸೀರೆ ಹಾಗೂ ವರನಿಗೆ ಕುರ್ತಾ-ಪೈಜಾಮು ಮತ್ತು ಹೂವಿನ ಹಾರವನ್ನು ದೇವಸ್ಥಾನದ ವತಿಯಿಂದ ನೀಡಲಾಯಿತು ಎಂದು ಆಯೋಜಕರು ತಿಳಿಸಿದರು.
ಸಾಮಾಜಿಕ ಸೌಹಾರ್ದತೆ ಹಾಗೂ ಸಮಾನತೆ ಸಂದೇಶ ಸಾರುವ ಈ ಕಾರ್ಯಕ್ರಮವು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದ್ದು, ಮುಂದಿನ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಜೋಡಿಗಳು ಭಾಗವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.
Mandarthi Sri Durgaparameshwari Temple, Brahmavara





