ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ತಾಯಿ-ಮಗಳು ಒಟ್ಟಿಗೆ ಪಿಯುಸಿ ಉತ್ತೀರ್ಣರಾಗಿರುವ ಅಪೂರ್ವ ಘಟನೆ ಎಲ್ಲರ ಗಮನ ಸೆಳೆದಿದೆ.
ಈ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬಿ.ಸಿ.ರೋಡ್ ಸಮೀಪದ ಕೈಕಂಬ ನಿವಾಸಿ ನೇತ್ರಾವತಿ ವಿ.ಆರ್. ಅವರು ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಗೃಹಿಣಿಯಾಗಿರುವ ಅವರು ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆಗೆ ಹಾಜರಾಗಿ ಕಲಾ ವಿಭಾಗದಲ್ಲಿ 257 ಅಂಕಗಳನ್ನು ಪಡೆದು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.
ಇದೇ ವೇಳೆ ಅವರ ಪುತ್ರಿ ಹೇಮಶ್ರೀ ಆರ್., ಬಿ.ಮೂಡ್ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿ ಇದೇ ಪರೀಕ್ಷೆಯಲ್ಲಿ ಭಾಗವಹಿಸಿ 562 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೆ, ತಮ್ಮ ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಕುಟುಂಬದ ಮುಖ್ಯಸ್ಥರು ಹಾಗೂ ನಂದಾವರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರವಿಕುಮಾರ್ ಅವರು ಪತ್ನಿ ಮತ್ತು ಪುತ್ರಿಯ ಈ ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಒಂದೇ ಸಮಯದಲ್ಲಿ ತಾಯಿ-ಮಗಳು ವಿದ್ಯಾಭ್ಯಾಸದಲ್ಲಿ ಯಶಸ್ಸು ಸಾಧಿಸಿರುವುದು ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ





