ಗಾನಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ: 8 ದಶಕಗಳ ಸಂಗೀತ ಯುಗಕ್ಕೆ ತೆರೆ

  • 12 Apr 2026 02:17:53 PM

ಮುಂಬೈ: ಭಾರತೀಯ ಚಲನಚಿತ್ರ ಸಂಗೀತ ಲೋಕದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರು 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಹಾಸ್ಪಿಟಲ್ ಗೆ ಶನಿವಾರ ಸಂಜೆ ದಾಖಲಿಸಲಾಗಿತ್ತು. ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರೂ, ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 

ಎಂಟು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಧ್ವನಿಯಿಂದ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಆಶಾ ಭೋಸಳೆ ಅವರು ಭಾರತೀಯ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಾವಿರಾರು ಹಾಡುಗಳನ್ನು ವಿವಿಧ ಭಾಷೆಗಳಲ್ಲಿ ಹಾಡಿ, ಭಿನ್ನ ಶೈಲಿಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಭಕ್ತಿಗೀತೆಗಳಿಂದ ಹಿಡಿದು ಗಝಲ್‌, ರೊಮ್ಯಾಂಟಿಕ್ ಹಾಡುಗಳು, ನೃತ್ಯಗೀತೆಗಳು ಸೇರಿದಂತೆ ಅನೇಕ ರೀತಿಯ ಹಾಡುಗಳಿಗೆ ಅವರು ಧ್ವನಿಯಾಗಿದ್ದರು.

 

ಆಶಾ ಭೋಸ್ಲೆ ಅವರ ಹಾಡುಗಳು ಹಲವು ಪೀಳಿಗೆಗಳನ್ನು ಸ್ಪರ್ಶಿಸಿದ್ದು, ಭಾರತೀಯ ಸಂಗೀತ ಇತಿಹಾಸದಲ್ಲಿ ಅವರ ಹೆಸರು ಸದಾ ಚಿರಸ್ಥಾಯಿಯಾಗಿರಲಿದೆ. ಪದ್ಮವಿಭೂಷಣ ಸೇರಿದಂತೆ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಅವರು ತಮ್ಮ ಸಂಗೀತ ಸೇವೆಗೆ ಪಡೆದಿದ್ದರು.

 

ಅವರ ನಿಧನ ಸುದ್ದಿ ತಿಳಿದ ತಕ್ಷಣ ದೇಶದ ವಿವಿಧ ಭಾಗಗಳಿಂದ ಕಲಾವಿದರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಭಾರತೀಯ ಸಂಗೀತ ಲೋಕಕ್ಕೆ ಇದು ತುಂಬಲಾರದ ನಷ್ಟವೆಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಆಶಾ ಭೋಸ್ಲೆ ಅವರ ಅಗಲಿಕೆಯಿಂದ ಭಾರತೀಯ ಸಂಗೀತದ ಒಂದು ಯುಗ ಅಂತ್ಯಗೊಂಡಂತಾಗಿದೆ. ಅವರ ಅಮರಗೀತೆಗಳು ಎಂದೆಂದಿಗೂ ಸಂಗೀತಾಸಕ್ತರ ಮನಗಳಲ್ಲಿ ಮೊಳಗುತ್ತಲೇ ಇರುತ್ತವೆ. ನಾಳೆ ಸಂಜೆ ಇವರ ಅಂತ್ಯ ಸಂಸ್ಕಾರ ನೆರವೇರಲಿದೆ,