ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಕರೆ ಮಾಡಿದ ಘಟನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಪ್ರಧಾನಿ ಮೋದಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, “ನನ್ನ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಬಂದಿದೆ” ಎಂದು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ತೀವ್ರವಾಗಿರುವ ಈ ಸಂದರ್ಭದಲ್ಲಿ, ಜೊತೆಗೆ ಪಾಕಿಸ್ತಾನದ ವಿಚಾರಗಳೂ ಚರ್ಚೆಯಲ್ಲಿರುವಾಗ, ಅಮೆರಿಕ ಅಧ್ಯಕ್ಷರು ನೇರವಾಗಿ ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸಿರುವುದು ಮಹತ್ವ ಪಡೆದುಕೊಂಡಿದೆ. ಪರಿಸ್ಥಿತಿಯನ್ನು ಶಮನಗೊಳಿಸಲು ಮುಂದಿನ ಮಾತುಕತೆ ಎಲ್ಲಲ್ಲಿ ನಡೆಯಲಿದೆ ಎಂಬುದನ್ನು ಜಗತ್ತೇ ಕಾದು ನೋಡುತ್ತಿದೆ.
ಸುಮಾರು 40 ನಿಮಿಷಗಳ ಕಾಲ ನಡೆದ ಈ ಮಾತುಕತೆಯಲ್ಲಿ ದ್ವಿಪಕ್ಷೀಯ ಸಹಕಾರ, ರಾಜತಾಂತ್ರಿಕ ವಿಷಯಗಳು ಹಾಗೂ ಮಧ್ಯಪ್ರಾಚ್ಯದ ಪರಿಸ್ಥಿತಿ ಕುರಿತು ಚರ್ಚಿಸಲಾಗಿದೆ ಎಂದು ಮೋದಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ನನ್ನ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಜಾಗತಿಕ ತಂತ್ರಾತ್ಮಕ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನೂ ಚರ್ಚಿಸಿ, ಹಾರ್ಮುಜ್ ಜಲಸಂಧಿಯನ್ನು ತೆರೆಯಾಗಿ ಮತ್ತು ಸುರಕ್ಷಿತವಾಗಿ ಇಡುವ ಅಗತ್ಯವನ್ನು ಒತ್ತಿ ಹೇಳಿದ್ದೇವೆ” ಎಂದು ಮೋದಿ ತಿಳಿಸಿದ್ದಾರೆ.
ಇರಾನ್ ಕೂಡ ಭಾರತವನ್ನು ತನ್ನ ಅಗ್ರ ಐದು ಸ್ನೇಹಿ ರಾಷ್ಟ್ರಗಳ ಪೈಕಿ ಒಂದಾಗಿ ಪರಿಗಣಿಸಿದೆ. ಇನ್ನೊಂದೆಡೆ ಅಮೆರಿಕವೂ ಭಾರತವನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತಿರುವುದು, ಪ್ರಸ್ತುತ ಜಾಗತಿಕ ರಾಜಕೀಯದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.
ಮುಂದಿನ ಶಾಂತಿ ಮಾತುಕತೆಗಳು ತಟಸ್ಥ ದೇಶದಲ್ಲಿ ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದರಿಂದ ಮಾತುಕತೆ ಪಾರದರ್ಶಕವಾಗಿದ್ದು, ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಹೆಚ್ಚುತ್ತದೆ. ಭಾರತವು ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ, ಇಂತಹ ಮಾತುಕತೆಗಳಿಗೆ ವೇದಿಕೆಯಾಗುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಯುದ್ಧದ ಆರಂಭದಲ್ಲೇ, “ಮೋದಿ ಅವರ ಒಂದು ಕರೆ ಈ ಸಂಘರ್ಷವನ್ನು ಪರಿಹರಿಸಬಹುದು” ಎಂದು ಯುಎಇಯ ಭಾರತದ ರಾಯಭಾರಿಯವರು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪಾಕಿಸ್ತಾನ ಮೂಲಕ ನಡೆದ ಮಾತುಕತೆಗಳು ಹೆಚ್ಚು ಫಲಕಾರಿಯಾಗದ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಭಾರತ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.





