ಮಹಾರಾಷ್ಟ್ರದಲ್ಲಿ ಬೆಚ್ಚಿಬೀಳಿಸುವ ಪ್ರಕರಣ: ಅಪ್ರಾಪ್ತೆಯರ ದುರುಪಯೋಗ, 300+ ವೀಡಿಯೊ ಪತ್ತೆ! ಅಮರಾವತಿ ಬಂದ್

  • 15 Apr 2026 12:18:13 PM

ಮುಂಬೈ/ಅಮರಾವತಿ: ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ 19 ವರ್ಷದ ಅಯಾನ್ ಅಹ್ಮದ್ ತನ್ವೀರ್ ಎಂಬಾತನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ರಾಜ್ಯ ಮತ್ತು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

 

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಹಲವು ಅಪ್ರಾಪ್ತೆಯರೊಂದಿಗೆ ಪರಿಚಯ ಬೆಳೆಸಿ, ಅವರನ್ನು ವಂಚನೆ ಹಾಗೂ ಒತ್ತಡದ ಮೂಲಕ ದುರುಪಯೋಗ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ 300 ಕ್ಕೂ ಹೆಚ್ಚು ವೀಡಿಯೊಗಳು ಹಾಗೂ ಫೋಟೋಗಳು ಪತ್ತೆಯಾಗಿರುವುದಾಗಿ ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ.

 

ಅದರ ಜೊತೆಗೆ, ಈ ದೃಶ್ಯಗಳನ್ನು ಬಳಸಿಕೊಂಡು ಪೀಡಿತರನ್ನು ಬ್ಲ್ಯಾಕ್ಮೇಲ್ ಮಾಡಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಪ್ರಕರಣದ ವ್ಯಾಪ್ತಿ ಹೆಚ್ಚಿರುವ ಸಾಧ್ಯತೆ ಇದ್ದು, ಇನ್ನಷ್ಟು ಪೀಡಿತರನ್ನು ಗುರುತಿಸುವ ಕೆಲಸವನ್ನು ಪೊಲೀಸರು ಮುಂದುವರೆಸಿದ್ದಾರೆ. ಕೋಚಿಂಗ್ ಸೆಂಟರ್ ನಲ್ಲಿ ಈ ದಂಧೆ ನಡೆದಿದ್ದು, ಈ ಪ್ರಕರಣದಲ್ಲಿ ಹಲವಾರು ಭಾಗಿಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ

 

ಪೀಡಿತೆಯರಲ್ಲಿ ಬಹುತೇಕರು ವಿದ್ಯಾರ್ಥಿನಿಯರೇ ಆಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಶಂಕಿತ ವ್ಯಕ್ತಿಗಳನ್ನೂ ವಿಚಾರಣೆಗಾಗಿ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಂಡ ರಚಿಸಿ, ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ. ಪೀಡಿತರ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

 

ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಅಪೂರ್ಣ ಅಥವಾ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಅಮರಾವತಿ ನಗರದ ಎಲ್ಲಾ ಸ್ಥಳೀಯರೊಂದಿಗೆ ಹಿಂದೂ ಸಂಘಟನೆಯು ಇಂದು ಬಂದ್‌ಗೆ ಕರೆ ನೀಡಿದೆ. ಇದು ಒಬ್ಬನ ಕೈಯಿಂದ ಮಾಡಲು ಅಸಾಧ್ಯವಾಗದ ಪ್ರಕರಣ, ಇದರಲ್ಲಿ ಹಲವಾರು ಜನ ಭಾಗಿಯಾಗಿರಬಹುದು, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಅಮರಾವತಿಯ ಸ್ಥಳೀಯರು ಒತ್ತಾಯಿಸಿದ್ದಾರೆ.

 

ಅಮರಾವತಿ ಪ್ರಕರಣವು ಅಪ್ರಾಪ್ತೆಯರ ಸುರಕ್ಷತೆ ಕುರಿತಾಗಿ ಮತ್ತೊಮ್ಮೆ ಗಂಭೀರ ಚಿಂತನೆಗೆ ಕಾರಣವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ತನಿಖೆಯ ಬಳಿಕವೇ ಹೊರಬರುವ ನಿರೀಕ್ಷೆಯಿದೆ.