ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆ ಕಳೆದ ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿದ್ದ ಆನ್‌ಲೈನ್ ತರಗತಿಗಳಿಗೆ ಇದೀಗ ತೆರೆ ಬೀಳಲಿದೆ. ಯುಎಇ ಮಿನಿಸ್ಟ್ರಿ ಆಫ್ ಎಜುಕೇಶನ್ (UAE Ministry of Education) ಪ್ರಕಟಣೆ ಪ್ರಕಾರ, ಯುಎಇ ಯಾದ್ಯಂತ ವಿದ್ಯಾರ್ಥಿಗಳು ಏಪ್ರಿಲ್ 20ರಿಂದ ಮತ್ತೆ ನೇರ ತರಗತಿಗಳಿಗೆ ಹಾಜರಾಗಲಿದ್ದಾರೆ.
ಈ ವಾರಾಂತ್ಯದಿಂದ ಆನ್ಲೈನ್ ಶಿಕ್ಷಣ (Distance Learning) ಸ್ಥಗಿತಗೊಳ್ಳಲಿದ್ದು, ಮುಂದಿನ ವಾರದಿಂದ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಶಾರ್ಜಾದ ಕೆಲ ಖಾಸಗಿ ಶಾಲೆಗಳ ಶಿಕ್ಷಕರು ಈಗಾಗಲೇ ಏಪ್ರಿಲ್ 15ರಿಂದಲೇ ಶಾಲೆಗಳಿಗೆ ಹಿಂತಿರುಗಲು ಆರಂಭಿಸಿರುವುದಾಗಿ ವರದಿಯಾಗಿದೆ.
ಇದೇ ವೇಳೆ, ಖಲೀಜ್ ಟೈಮ್ಸ್ ವರದಿ ಪ್ರಕಾರ, ದುಬೈಯ ಶಾಲೆಗಳು ಪಾಲಕರ ಅಭಿಪ್ರಾಯ ತಿಳಿದುಕೊಳ್ಳಲು ಸಮೀಕ್ಷೆ ನಡೆಸಿದ್ದು, ಹೆಚ್ಚಿನವರು ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಲು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಟ್ರಾಫಿಕ್ ಸಮಸ್ಯೆ ಬಗ್ಗೆ ಆತಂಕ
ಶಾಲೆಗಳು ಮತ್ತೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಕಚೇರಿ ನೌಕರರು ಟ್ರಾಫಿಕ್ ಸಮಸ್ಯೆ ಮರುಕಳಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ರಸ್ತೆಗಳಲ್ಲಿ ಸಂಚಾರ ಸುಗಮವಾಗಿದ್ದುದರಿಂದ ಅದೇ ಸ್ಥಿತಿ ಮುಂದುವರಿಯುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆದರೆ, ಹೆಚ್ಚಿನವರು ಮಕ್ಕಳ ಶಿಕ್ಷಣ ಮತ್ತು ಭವಿಷ್ಯವೇ ಅತ್ಯಂತ ಪ್ರಮುಖವಾಗಿದ್ದು, ಶಾಲೆಗಳು ಪುನರಾರಂಭವಾಗುವುದು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ಶಾಲೆಗಳು ಸುರಕ್ಷಿತ ಹಾಗೂ ಸುಗಮವಾಗಿ ಪುನರಾರಂಭವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.





