22 June 2026 |

ಯಾದಗಿರಿಯಲ್ಲಿ ಭೀಕರ ರಸ್ತೆ ಅಪಘಾತ: ಬಸ್-ಕಾರು ಮುಖಾಮುಖಿ ಡಿಕ್ಕಿ, ಆರು ಮಂದಿ ಸಜೀವ ದಹನ

  • 17 Apr 2026 01:08:48 PM

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ದೇವಪುರ ಗ್ರಾಮದ ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ಬೆಂಕಿಗೆ ಆಹುತಿಯಾಗಿ ಸಜೀವ ದಹನಗೊಂಡಿದ್ದಾರೆ.

 

ಯಾದಗಿರಿಯಿಂದ ರಾಯಚೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಡಿಕ್ಕಿ ಹೊಡೆದ ಕ್ಷಣಾರ್ಧದಲ್ಲೇ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

 

ಕಾರಿನಲ್ಲಿದ್ದ ಪ್ರಯಾಣಿಕರು ಹೊರಬರಲಾಗದೆ ಅಸಹಾಯಕರಾಗಿ ಬೆಂಕಿಯ ಕೆನ್ನಾಲಗೆಗೆ ಸಿಲುಕಿದ್ದಾರೆ. ಸ್ಥಳೀಯರು ರಕ್ಷಣೆಗೆ ಧಾವಿಸುವಷ್ಟರಲ್ಲೇ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದ್ದರಿಂದ, ಆರೂ ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 

ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಾರಿನಲ್ಲಿದ್ದವರು ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು.

 

ಅಪಘಾತದ ತೀವ್ರತೆಗೆ ಖಾಸಗಿ ಬಸ್ಸಿನ ಮುಂಭಾಗ ಜಖಂಗೊಂಡಿದೆಯಾದರೂ, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

 

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಇನ್ನು ಪತ್ತೆಯಾಗಬೇಕಿದ್ದು, ಪೊಲೀಸರು ವಾರಸುದಾರರ ಪತ್ತೆಗೆ ಜಾಲ ಬೀಸಿದ್ದಾರೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ