ಯುಎಸ್ ಮತ್ತು ಇರಾನ್ ನಡುವೆ ಸಂಧಾನ ನಡೆಸಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಈಗ ಭಾರೀ ಅಘಾತವಾಗಿದೆ. ಪಾಕಿಸ್ತಾನದ ಆರ್ಮಿ ಚೀಫ್ ಅಸೀಂ ಮುನೀರ್ ಅವರ ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆ ಗಂಭೀರ ಆತಂಕ ವ್ಯಕ್ತಪಡಿಸಿದೆ. ಅಸೀಂ ಮುನೀರ್ ಮತ್ತು ಇರಾನ್‌ನೊಂದಿಗೆ ಇರುವ ಸಂಬಂಧವನ್ನು ಅಮೆರಿಕದ ಗುಪ್ತಚರ ಇಲಾಖೆ ‘ರೆಡ್ ಫ್ಲಾಗ್’ ಎಂದು ಗುರುತಿಸಿದೆ ಎನ್ನುವ ಸ್ಪೋಟಕ ವರದಿ ಫಾಕ್ಸ್ ನ್ಯೂಸ್ (Fox News) ನಲ್ಲಿ ಪ್ರಕಟವಾಗಿದೆ.
ಈ ಬೆಳವಣಿಗೆ ಯುಎಸ್–ಪಾಕಿಸ್ತಾನ ರಾಜತಾಂತ್ರಿಕ ಮತ್ತು ಭದ್ರತಾ ಸಂಬಂಧಗಳ ಹಿನ್ನೆಲೆಯೊಂದಿಗೆ ಮಧ್ಯಪ್ರಾಚ್ಯದ ಭದ್ರತೆ ಕುರಿತು ಹೊಸ ಚರ್ಚೆಯನ್ನು ಹುಟ್ಟಿಸಿದೆ. ಅಮೆರಿಕ ಗುಪ್ತಚರ ಇಲಾಖೆ ಅಸೀಂ ಮುನೀರ್ ಅವರನ್ನು ‘ರೆಡ್ ಫ್ಲಾಗ್’ ಎಂದು ಗುರುತಿಸಿದ ಸೂಚನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕದ ವರದಿಗಳ ಪ್ರಕಾರ, ಪಾಕಿಸ್ತಾನದ ಸೇನಾ ಮುಖ್ಯಸ್ಥರಾದ ಅಸೀಂ ಮುನೀರ್ ಅವರಿಗೆ ಇರಾನ್‌ನ ಸೇನೆ ಮತ್ತು ಗುಪ್ತಚರ ಇಲಾಖೆಯ ಹಿರಿಯ ನಾಯಕರು ಹಾಗೂ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (Islamic Revolutionary Guard Corps - IRGC) ಜೊತೆ ದೀರ್ಘಕಾಲಿಕ ಸಂಬಂಧಗಳಿದ್ದು, ಇದು ಅಮೆರಿಕದ ಭದ್ರತಾ ಹಿತಾಸಕ್ತಿಗಳಿಗೆ “ರೆಡ್ ಫ್ಲಾಗ್ ಸಂಕೇತ” ಎಂದು ಪರಿಗಣಿಸಲಾಗಿದೆ.
ವರದಿಯಲ್ಲಿ ಹೇಳಿರುವಂತೆ, ಮುನೀರ್ ಅವರು ಇರಾನ್‌ನ ಪ್ರಮುಖ ನಾಯಕರೊಂದಿಗೆ ಹತ್ತಿರ ಸಂಪರ್ಕದಲ್ಲಿದ್ದು, ಇತ್ತೀಚೆಗೆ ಯುಎಸ್–ಇರಾನ್ ನಡುವಿನ ಮಧ್ಯಂತರ ಮಾತುಕತೆಗಳಲ್ಲಿ ಹಿನ್ನಲೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಕೆಲವು ಗುಪ್ತಚರ ಅಧಿಕಾರಿಗಳು ಮತ್ತು ಭದ್ರತಾ ತಜ್ಞರು ಇದನ್ನು ಅಮೆರಿಕದ ಆಸಕ್ತಿಗಳಿಗೆ ಅಪಾಯಕಾರಿಯಾಗಿ ನೋಡುತ್ತಿದ್ದಾರೆ.
ಹಲವಾರು ವಿಶ್ಲೇಷಕರ ಅಭಿಪ್ರಾಯದಂತೆ, ಪಾಕಿಸ್ತಾನ ಇತಿಹಾಸದಲ್ಲಿಯೂ ಕೆಲವು ಸಂದರ್ಭಗಳಲ್ಲಿ “perfidious ally” ಅಂದರೆ ‘ನಂಬಿಕೆಯಾಗದ ಮೈತ್ರಿ’ ಎಂಬ ಗುರುತಿಗೆ ಒಳಪಟ್ಟಿದೆ. ಇದನ್ನು 2001–2021ರ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ನಡವಳಿಕೆಗೆ ಸಂಬಂಧಿಸಲಾಗಿದೆ.
ಈ ಬೆಳವಣಿಗೆಗಳು ಈಗ ನ್ಯೂಯಾರ್ಕ್, ವಾಷಿಂಗ್ಟನ್ ಸೇರಿದಂತೆ ರಾಜಕೀಯ ವಲಯಗಳಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿವೆ. ಪಾಕಿಸ್ತಾನ ಈಗಾಗಲೇ ಎರಡನೇ ಸುತ್ತಿನ ಸಂಧಾನ ಮಾತುಕತೆಗೆ ವೇದಿಕೆ ಸಿದ್ಧಗೊಳಿಸುತ್ತಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಗಲ್ಫ್ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಯುಎಸ್–ಇರಾನ್ ಬಿಕ್ಕಟ್ಟು ಬಗೆಹರಿಸಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ ಅಮೆರಿಕ ಗುಪ್ತಚರದ ಸಂಶಯ ಮುಂದಿನ ನಡೆ ಕುರಿತು ಅನುಮಾನ ಮೂಡಿಸಿದೆ.





