ವಿಶ್ವದಲ್ಲಿ ಅತಿ ಹೆಚ್ಚು ಭೂಕಂಪಗಳು ಸಂಭವಿಸುವ ದೇಶಗಳಲ್ಲಿ ಪ್ರಮುಖವಾದ ಜಪಾನ್‌ನ ಉತ್ತರ ಭಾಗದಲ್ಲಿ ಭೀಕರ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪನದಲ್ಲಿ 7.4 ತೀವ್ರತೆಯ ಈ ಭೂಕಂಪ ಸಂಭವಿಸಿರುವುದಾಗಿ ಜಪಾನ್ ಹವಾಮಾನ ಸಂಸ್ಥೆ ವರದಿ ಮಾಡಿದೆ. ಜಪಾನ್‌ನಲ್ಲಿ ವರ್ಷಕ್ಕೆ ಸರಾಸರಿ 1,800 ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸುತ್ತವೆ. ಆದರೆ ಇಂದು ಸಂಭವಿಸಿರುವ ಭೂಕಂಪದ ತೀವ್ರತೆ ಹೆಚ್ಚಿನದಾಗಿದ್ದು, ಟೋಕಿಯೋ ನಗರದಲ್ಲಿನ ಎತ್ತರದ ಕಟ್ಟಡಗಳು ಅಲುಗಾಡಿರುವುದಾಗಿ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಉತ್ತರ ಜಪಾನ್ ಪ್ರದೇಶದಲ್ಲಿ ಸುಮಾರು ಮೂರು ಮೀಟರ್ (10 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ನೀಡಲಾಗಿದೆ. ಜಪಾನ್‌ನ ಇವಾಟೆ ಪ್ರದೇಶದ ಸಮೀಪ ಪೆಸಿಫಿಕ್ ಸಾಗರದಲ್ಲಿ ಬೆಳಿಗ್ಗೆ 4:53ಕ್ಕೆ ಭೂಕಂಪ ಸಂಭವಿಸಿದೆ. ಭಾರತೀಯ ಸಮಯದ ಪ್ರಕಾರ ಅದು ಸುಮಾರು ರಾತ್ರಿ 1:23 ಗಂಟೆಗೆ ಸಂಭವಿಸಿದೆ.
2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿ ಘಟನೆಯು ಇಲ್ಲಿ ನೆನಪಿಸಬಹುದಾಗಿದೆ. ಆ ಸಂದರ್ಭದಲ್ಲಿ ರಿಕ್ಟರ್ ಮಾಪನದಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿ, ವಿಶ್ವದಾದ್ಯಂತ ಸುಮಾರು 18,500 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಇಂದಿನ 7.4 ತೀವ್ರತೆಯ ಭೂಕಂಪ ಕೂಡ ಜಪಾನ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ.





