ದಕ್ಷಿಣ ಕನ್ನಡದಲ್ಲಿ 3 ಟೋಲ್ ಗೇಟ್‌ಗಳು 6 ಕ್ಕೆ ಏರಿಕೆ - ಜನಸಾಮಾನ್ಯರ ಮೇಲೆ ಪರಿಣಾಮ ಬೀಳಲಿದೆಯೇ? Explained

  • 29 Apr 2026 11:13:38 AM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೋಲ್ ಪ್ಲಾಜಾಗಳ ಸಂಖ್ಯೆ ಶೀಘ್ರದಲ್ಲೇ ಆರಕ್ಕೆ ಏರಲಿದೆ. ಈಗಾಗಲೇ ಮೂರು ಟೋಲ್ ಗೇಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳ ಭಾಗವಾಗಿ ಇನ್ನೂ ಮೂರು ಟೋಲ್ ಪ್ಲಾಜಾಗಳು ನಿರ್ಮಾಣವನ್ನು ಪೂರ್ಣಗೊಳಿಸಿವೆ ಅಥವಾ ಅಂತಿಮ ಹಂತದಲ್ಲಿವೆ.

 

ಸಾಮಾನ್ಯವಾಗಿ ಒಂದು ಜಿಲ್ಲೆ ಅಭಿವೃದ್ಧಿ ಹೊಂದುವ ಸಂದರ್ಭದಲ್ಲಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹೊಸ ರೂಪ ತಾಳುವುದು ಅನಿವಾರ್ಯವಾಗುತ್ತದೆ. ಈಗಾಗಲೇ ಇರುವ ರಸ್ತೆಗಳನ್ನು ಅಗಲೀಕರಣ ನಡೆಸುವುದು, ಮತ್ತಷ್ಟು ಲೇನ್ ಸೇರಿಸುವುದು, ಹೊಸದಾದ ಫ್ಲೈ ಓವರ್ ನಿರ್ಮಿಸುವುದು, ಹೆಚ್ಚು ತಿರುವುಗಳಿರುವ ರಸ್ತೆಗಳನ್ನು ಸರಿಪಡಿಸುವುದು ಅಥವಾ ಹೊಸದಾದ ರಸ್ತೆಯನ್ನೇ ನಿರ್ಮಿಸುವುದು ಈ ಎಲ್ಲಾ ಕೆಲಸಕಾರ್ಯಗಳು ಅಭಿವೃದ್ಧಿಯ ಸಂಕೇತವಾಗಿದೆ. ಆದರೆ ಜನಸಾಮಾನ್ಯರ ಮೇಲೆ ಹೆಚ್ಚುವರಿ ಭಾರ ಬೀಳದಂತೆ ನೋಡಿಕೊಳ್ಳುವುದು ಕೂಡ ಸರಕಾರ ಮತ್ತು ರಸ್ತೆ ಪ್ರಾಧಿಕಾರ ಅಭಿವೃದ್ಧಿ ನಿಗಮ ಇವರ ಮೂಲಕ ಮೂಲ ಕರ್ತವ್ಯವಾಗಿರುತ್ತದೆ.

 

ಈಗಿರುವ ಟೋಲ್ ಪ್ಲಾಜಾಗಳು ಎಲ್ಲಿವೆ?

ಪ್ರಸ್ತುತ ದಕ್ಷಿಣ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಲ್ ಪ್ಲಾಜಾಗಳು:

1. ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ – ಎನ್‌ಎಚ್ 75, ಬಂಟ್ವಾಳ/ಬಿ.ಸಿ ರೋಡ್ ಸಮೀಪ

2. ತಲಪಾಡಿ ಟೋಲ್ ಪ್ಲಾಜಾ – ಎನ್‌ಎಚ್ 66, ಕರ್ನಾಟಕ–ಕೇರಳ ಗಡಿಭಾಗ

3. ಹೆಜಮಾಡಿ ಟೋಲ್ ಪ್ಲಾಜಾ – ಎನ್‌ಎಚ್ 66, ಉಡುಪಿ ಗಡಿಭಾಗ ಸಮೀಪ

ಇವು ಮುಖ್ಯವಾಗಿ ಅಂತರ್ಜಿಲ್ಲಾ ಮತ್ತು ಅಂತರ್ ರಾಜ್ಯ ಸಂಚಾರಕ್ಕೆ ಸೇವೆ ಸಲ್ಲಿಸುತ್ತಿವೆ.

 

ಹೊಸದಾಗಿ ಸೇರ್ಪಡೆಯಾಗುತ್ತಿರುವ ಟೋಲ್ ಪ್ಲಾಜಾಗಳು ಯಾವುವು?

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಾಗೂ ಅಭಿವೃದ್ಧಿ ಯೋಜನೆಗಳ ಭಾಗವಾಗಿ ನಿರ್ಮಾಣಗೊಂಡಿರುವ ಹೊಸ ಟೋಲ್ ಪ್ಲಾಜಾಗಳು:

1. ಗಂಜಿಮಠ ಟೋಲ್ ಪ್ಲಾಜಾ – ಮಂಗಳೂರು–ಮೂಡಬಿದ್ರೆ–ಕಾರ್ಕಳ (ಎನ್‌ಎಚ್ 169)

2. ವಳಲು (ಬಜತ್ತೂರು) ಟೋಲ್ ಪ್ಲಾಜಾ – ಬಿಸಿ ರೋಡ್–ಪೆರಿಯಶಾಂತಿ (ಎನ್‌ಎಚ್ 75), ಉಪ್ಪಿನಂಗಡಿ ಸಮೀಪ

3. ಪಣಪಿಳ (ಪಣಕಜೆ) ಟೋಲ್ ಪ್ಲಾಜಾ – ಎನ್‌ಎಚ್ 169

ಇವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಬಳಿಕ ಜಿಲ್ಲೆಯಲ್ಲಿನ ಟೋಲ್ ಪ್ಲಾಜಾಗಳ ಸಂಖ್ಯೆ ಆರು ಆಗಲಿದೆ.

 

ಟೋಲ್ ಪ್ಲಾಜಾಗಳು ಏಕೆ ಸ್ಥಾಪಿಸಲಾಗುತ್ತವೆ?

ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ರಸ್ತೆ ವಿಸ್ತರಣೆ, ಸೇತುವೆ ನಿರ್ಮಾಣ, ಸುರಂಗ ಮಾರ್ಗ, ಮತ್ತು ರಸ್ತೆ ಗುಣಮಟ್ಟ ಸುಧಾರಣೆಗಾಗಿ ದೊಡ್ಡ ಮೊತ್ತದ ಹೂಡಿಕೆ ಮಾಡಲಾಗುತ್ತದೆ. ಈ ವೆಚ್ಚವನ್ನು ನಿರ್ದಿಷ್ಟ ಅವಧಿಯಲ್ಲಿ ವಸೂಲಿ ಮಾಡಲು ಟೋಲ್ ಶುಲ್ಕ ವ್ಯವಸ್ಥೆ ಜಾರಿಗೆ ಬರುತ್ತದೆ. ಟೋಲ್ ಪ್ಲಾಜಾಗಳ ಸ್ಥಾಪನೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿಗಳ ಆಧಾರದಲ್ಲಿ ನಡೆಯುತ್ತದೆ.

 

ಒಂದೇ ಜಿಲ್ಲೆಯಲ್ಲಿ, ವಿಶೇಷವಾಗಿ ಮಂಗಳೂರಿನ 60 ಕಿ.ಮೀ ವ್ಯಾಪ್ತಿಯಲ್ಲಿ ಆರು ಟೋಲ್ ಪ್ಲಾಜಾಗಳು ಇರುವುದರಿಂದ, ದೈನಂದಿನ ಪ್ರಯಾಣಿಕರಿಗೆ ಹೆಚ್ಚುವರಿ ವೆಚ್ಚ, ಸಣ್ಣ ವ್ಯಾಪಾರಿಗಳಿಗೆ ಸಾರಿಗೆ ಖರ್ಚು ಹೆಚ್ಚಳ ಮತ್ತು ಸಮೀಪದ ಪಟ್ಟಣಗಳ ನಡುವೆ ಸಂಚರಿಸುವವರಿಗೆ ಮರುಮರು ಟೋಲ್ ಶುಲ್ಕ ಪಾವತಿ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಮತ್ತೊಂದೆಡೆ ಅಭಿವೃದ್ಧಿಗೊಂಡ ಹೆದ್ದಾರಿಗಳು ವೇಗವಾದ ಸಂಚಾರ, ಅಪಘಾತಗಳ ಕಡಿತ ಮತ್ತು ಲಾಜಿಸ್ಟಿಕ್ಸ್ ಸುಧಾರಣೆ ಇಂತಹ ಲಾಭಗಳನ್ನು ಕೂಡ ನೀಡುತ್ತವೆ ಎಂಬ ಅಭಿಪ್ರಾಯವೂ ಇದೆ.

 

ಟೋಲ್ ಪ್ಲಾಜಾಗಳ ನಡುವೆ ಇರುವ ಅಂತರ, ಸ್ಥಳೀಯ ವಾಹನಗಳಿಗೆ ರಿಯಾಯಿತಿ ವ್ಯವಸ್ಥೆ, ಮಾಸಿಕ ಪಾಸ್ ವ್ಯವಸ್ಥೆ ಇತ್ಯಾದಿ ವಿಷಯಗಳಲ್ಲಿ ಸ್ಪಷ್ಟ ಮಾಹಿತಿ ದೊರೆತರೆ ಜನರಲ್ಲಿ ಮೂಡಿರುವ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆ ವೇಗವಾಗಿ ಮೂಲಸೌಕರ್ಯ ಅಭಿವೃದ್ಧಿ ಕಾಣುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದ್ದು, ಟೋಲ್ ಪ್ಲಾಜಾಗಳ ಹೆಚ್ಚಳವೂ ಅದರ ಭಾಗವಾಗಿಯೇ ಕಾಣಲಾಗುತ್ತಿದೆ.