ಕಾರವಾರ: ಕಾರವಾರ ಮತ್ತು ಮಡಗಾಂವ್ ನಡುವಿನ ವಿಶೇಷ ರೈಲು ಸೇವೆಯನ್ನು ಭಾರತೀಯ ರೈಲ್ವೆ ಇದೀಗ ಖಾಯಂ ಸೇವೆಯಾಗಿ ಪರಿವರ್ತಿಸಿದ್ದು, ಈ ಕುರಿತು ರೈಲ್ವೆ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ಹಲವು ವರ್ಷಗಳಿಂದ ಸಾರ್ವಜನಿಕರು ಹಾಗೂ ರೈಲ್ವೆ ಪ್ರಯಾಣಿಕರು ಈ ಸೇವೆಯನ್ನು ಶಾಶ್ವತಗೊಳಿಸುವಂತೆ ಒತ್ತಾಯಿಸುತ್ತಿದ್ದರು.
ಈ ರೈಲು ಸೇವೆಯನ್ನು ಖಾಯಂಗೊಳಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿರಂತರವಾಗಿ ಪ್ರಯತ್ನ ನಡೆಸಿದ್ದು, ಅವರ ಪ್ರಯತ್ನಕ್ಕೆ ಇದೀಗ ಯಶಸ್ಸು ದೊರೆತಿದೆ. ಇದುವರೆಗೆ ರೈಲು ಸಂಖ್ಯೆ 01595/01596ರ ಅಡಿಯಲ್ಲಿ ವಿಶೇಷ ಸೇವೆಯಾಗಿ ಕಾರ್ಯನಿರ್ವಹಿಸುತ್ತಿದ್ದ ರೈಲು, ಇನ್ನು ಮುಂದೆ ರೈಲು ಸಂಖ್ಯೆ 10109/10110ರ ಅಡಿಯಲ್ಲಿ ಮಡಗಾಂವ್-ಕಾರವಾರ-ಮಡಗಾಂವ್ ಎಕ್ಸ್‌ಪ್ರೆಸ್ ರೈಲಾಗಿ ಪ್ರತಿದಿನ ಸಂಚರಿಸಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲು ಪ್ರತಿದಿನ ಎರಡು ನಗರಗಳ ನಡುವೆ ಓಡಲಿದ್ದು, ಮಾರ್ಗಮಧ್ಯೆ ಕಾಣಕೋಣ ನಿಲ್ದಾಣದಲ್ಲಿ ವಾಣಿಜ್ಯ ನಿಲುಗಡೆ ನೀಡಲಿದೆ.
ಹೊಸ ವೇಳಾಪಟ್ಟಿಯಂತೆ, ರೈಲು ಸಂಖ್ಯೆ 10110 ಕಾರವಾರ-ಮಡಗಾಂವ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಳಗ್ಗೆ 8:30ಕ್ಕೆ ಕಾರವಾರದಿಂದ ಹೊರಡಲಿದ್ದು, ಬೆಳಗ್ಗೆ 9:45ಕ್ಕೆ ಮಡಗಾಂವ್ ತಲುಪಲಿದೆ.





