11 June 2026 |

ಬಂಟ್ವಾಳ: ಶಾಲಾ ವಾಹನಗಳ ತಪಾಸಣೆ ನಡೆಸಿದ ಸಂಚಾರ ಪೊಲೀಸರು; 20ಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣ ದಾಖಲು

  • 10 Jun 2026 01:42:08 PM

ಬಂಟ್ವಾಳ: ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಸಾಗಿಸುವ ಶಾಲಾ ವಾಹನಗಳು ನಿಗದಿತ ಕಾನೂನು ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಎಸ್‌.ಐ. ಆದರ್ಶ್ ಅವರ ನೇತೃತ್ವದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು.

 

ಬೆಳಗಿನ ಜಾವ 6 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಎಸ್‌.ಐ. ಆದರ್ಶ್ ಹಾಗೂ ಸಿಬ್ಬಂದಿ, ಬಿ.ಸಿ.ರೋಡ್ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಶಾಲಾ ಬಸ್‌ಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಿದರು. ಈ ವೇಳೆ ವಾಹನಗಳ ಅಗತ್ಯ ದಾಖಲೆಗಳು, ಸುರಕ್ಷತಾ ಮಾನದಂಡಗಳು ಹಾಗೂ ಇತರೆ ನಿಯಮಗಳ ಅನುಸರಣೆ ಕುರಿತು ಪರಿಶೀಲಿಸಲಾಯಿತು.ತಪಾಸಣೆಯಲ್ಲಿ ನಿಯಮ ಉಲ್ಲಂಘಿಸಿರುವ ವಾಹನಗಳು ಮತ್ತು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಲಾಯಿತು. ಒಂದೇ ದಿನದಲ್ಲಿ ಸುಮಾರು 20 ಪ್ರಕರಣಗಳು ದಾಖಲಾಗಿವೆ.

 

ಯೂನಿಫಾರ್ಮ್ ಧರಿಸದೇ ವಾಹನ ಚಲಾಯಿಸಿದ್ದ ಆರು ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಆರ್‌ಟಿಒ ನಿಗದಿಪಡಿಸಿದ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸುತ್ತಿದ್ದ ನಾಲ್ಕು ಶಾಲಾ ಬಸ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಫಿಟ್‌ನೆಸ್ ಪ್ರಮಾಣಪತ್ರದ ಅವಧಿ ಮುಗಿದಿದ್ದ ಒಂದು ಬಸ್ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದ ಕೆಲವು ವಾಹನಗಳ ಮೇಲೂ ಕಾನೂನು ಕ್ರಮ ಜರುಗಿಸಲಾಗಿದೆ.

 

ಶಾಲಾ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಾಲಾ ವಾಹನಗಳು ಇಲಾಖೆಯ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ವಾಹನ ಚಾಲಕರು ಹೆಚ್ಚಿನ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸುವ ಶಾಲಾ ವಾಹನಗಳು ಹಾಗೂ ಚಾಲಕರ ವಿರುದ್ಧ ಮುಂದೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.