12 June 2026 |

ಚಿನ್ನದ ದರದಲ್ಲಿ ನಿರಂತರ ಇಳಿಕೆ: ಎರಡು ದಿನಗಳಲ್ಲಿ 600 ರೂ ಕುಸಿತ, ಖರೀದಿದಾರರಿಗೆ ಸಂತಸದ ಸುದ್ದಿ

  • 11 Jun 2026 01:40:45 PM

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಮುಖದ ಹಾದಿಯಲ್ಲೇ ಮುಂದುವರಿದಿದೆ. ಬುಧವಾರ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಬಂಗಾರದ ದರ, ಗುರುವಾರವೂ ಮತ್ತಷ್ಟು ಇಳಿಕೆಯಾಗಿದೆ. 

ಕಳೆದ ಎರಡು ದಿನಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಒಟ್ಟಾರೆ ಸುಮಾರು 600 ರೂಪಾಯಿಗಳಷ್ಟು ಕಡಿತ ದಾಖಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಇಳಿಕೆಯಾಗಿರುವುದು ಇದರ ಮೇಲೆ ಪರಿಣಾಮ ಬೀರಿದೆ.

ಪ್ರಸ್ತುತ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ 13,350 ರೂಪಾಯಿಗೆ ತಲುಪಿದ್ದು, ಹಿಂದಿನ ದಿನದ 13,545 ರೂಪಾಯಿಯಿಂದ 195 ರೂಪಾಯಿ ಇಳಿಕೆಯಾಗಿದೆ. ಅದೇ ವೇಳೆ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,564 ರೂಪಾಯಿಯಾಗಿ ನಿಗದಿಯಾಗಿದೆ.

ಬೆಳ್ಳಿ ದರದಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬಂದ ಇಳಿಕೆಯ ಬಳಿಕ ಗುರುವಾರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 250 ರೂಪಾಯಿಯಲ್ಲೇ ಸ್ಥಿರವಾಗಿದೆ. ಚೆನ್ನೈ ಹಾಗೂ ಕೆಲ ದಕ್ಷಿಣ ಭಾರತದ ಪ್ರದೇಶಗಳಲ್ಲಿ ಪ್ರತಿ ಗ್ರಾಂ ಬೆಳ್ಳಿ ದರ 260 ರೂಪಾಯಿಯಾಗಿದೆ.

ದೇಶದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,33,500 ರೂಪಾಯಿಯಾಗಿದ್ದರೆ, 10 ಗ್ರಾಂ 24 ಕ್ಯಾರಟ್ ಚಿನ್ನದ ದರ 1,45,640 ರೂಪಾಯಿಯಾಗಿದೆ. ಇದೇ ವೇಳೆ 100 ಗ್ರಾಂ ಬೆಳ್ಳಿಯ ಬೆಲೆ 25,000 ರೂಪಾಯಿಯಲ್ಲಿ ಮುಂದುವರಿದಿದೆ. 

ಬೆಂಗಳೂರಿನಲ್ಲಿಯೂ ಇದೇ ದರಗಳು ಜಾರಿಯಲ್ಲಿವೆ. ತಮಿಳುನಾಡು ಮತ್ತು ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ 26,000 ರೂಪಾಯಿಗೆ ತಲುಪಿದೆ.

ಜೂನ್ 11ರ ಚಿನ್ನ ಮತ್ತು ಬೆಳ್ಳಿ ದರಗಳು:

24 ಕ್ಯಾರಟ್ ಚಿನ್ನ (1 ಗ್ರಾಂ): 14,564 ರೂ

22 ಕ್ಯಾರಟ್ ಚಿನ್ನ (1 ಗ್ರಾಂ): 13,350 ರೂ

18 ಕ್ಯಾರಟ್ ಚಿನ್ನ (1 ಗ್ರಾಂ): 10,923 ರೂ

ಬೆಳ್ಳಿ (1 ಗ್ರಾಂ): 250 ರೂ ರಷ್ಟಿದೆ.