ಶಿವಮೊಗ್ಗ: ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ-169ಎ ವ್ಯಾಪ್ತಿಯ ಆಗುಂಬೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ ಮಾರ್ಗದಲ್ಲಿ ಜೂನ್ 15ರಿಂದ ಮಳೆಗಾಲ ಅಂತ್ಯಗೊಳ್ಳುವವರೆಗೆ ಭಾರಿ ವಾಹನಗಳು ಸಂಚರಿಸಬಾರದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚನೆ ನೀಡಿದ್ದಾರೆ. ಈ ಅವಧಿಯಲ್ಲಿ ವಾಹನಗಳು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ತಿಳಿಸಲಾಗಿದೆ.
ಹೊಸನಗರ-ಮಾಸ್ತಿಕಟ್ಟೆ ಮೂಲಕ ಕುಂದಾಪುರ ಹಾಗೂ ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟ್ ಪ್ರದೇಶದಲ್ಲಿ ಭೂಕುಸಿತ ಉಂಟಾದ ಬಳಿಕ ದುರಸ್ತಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಆಗುಂಬೆ ಘಾಟ್ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟ ಹೆಚ್ಚಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮಳೆಗಾಲದಲ್ಲಿ ರಸ್ತೆ ಬದಿಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದ್ದು, ಅಪಘಾತಗಳ ಅಪಾಯವೂ ಹೆಚ್ಚಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಇದಲ್ಲದೆ, ಮಣಿಪಾಲ, ಉಡುಪಿ ಮತ್ತು ಮಂಗಳೂರು ಭಾಗಗಳಿಗೆ ಚಿಕಿತ್ಸೆ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ಸಂಚರಿಸುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಈ ಮಾರ್ಗ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ರಸ್ತೆ ಸಂಪರ್ಕಕ್ಕೆ ಅಡಚಣೆ ಉಂಟಾದರೆ ನಾಲ್ಕು ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ತೆರಳುವ ವಾಹನಗಳು ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಅಥವಾ ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗಗಳನ್ನು ಬಳಸಬೇಕು. ಅದೇ ರೀತಿ ಉಡುಪಿಯಿಂದ ತೀರ್ಥಹಳ್ಳಿಗೆ ಬರುವ ವಾಹನಗಳು ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಅಥವಾ ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ-ತೀರ್ಥಹಳ್ಳಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.





