13 June 2026 |

ಭಾರತ–ಓಮನ್ ಆಳ ಸಮುದ್ರ ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಪುನರ್ಜೀವನ: ಇಂಧನ ಸುರಕ್ಷತೆಗೆ ಹೊಸ ದಿಕ್ಕು

  • 12 Jun 2026 04:23:45 PM

ನವದೆಹಲಿ: ಇಂಧನ ಸುರಕ್ಷತೆಯನ್ನು ಸುಧಾರಿಸುವ ಮತ್ತು ಹಾರ್ಮುಜ್ ಜಲಸಂಧಿಯ ಅಡೆತಡೆಗಳಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ, ಭಾರತವು ಗ್ಯಾಸ್ ಪೈಪ್‌ಲೈನ್ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ವಿಶ್ವಾಸಾರ್ಹ ಮಾಧ್ಯಮಗಳಿಂದ ತಿಳಿದು ಬಂದಿದೆ.

 

ಭಾರತ ಸರ್ಕಾರವು ₹40,000 ಕೋಟಿ ವೆಚ್ಚದಲ್ಲಿ ಓಮನ್–ಗುಜರಾತ್ ಸಂಪರ್ಕ ಕಲ್ಪಿಸುವ ಸುಮಾರು 2,000 ಕಿಮೀ ಉದ್ದದ ಮಧ್ಯಪ್ರಾಚ್ಯ–ಭಾರತ ಆಳ ಸಮುದ್ರ (Subsea) ಪೈಪ್‌ಲೈನ್ ಅನ್ನು ಪುನರುಜ್ಜೀವನಗೊಳಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

 

ಇತ್ತೀಚೆಗೆ ನಡೆಯುತ್ತಿರುವ ಅಮೆರಿಕ–ಇರಾನ್ ಸಂಘರ್ಷದಿಂದ ಉಂಟಾಗುತ್ತಿರುವ ಭೌಗೋಳಿಕ ರಾಜಕೀಯ ಒತ್ತಡ ಹಾಗೂ ಹಾರ್ಮುಜ್ ಜಲಸಂಧಿಯ ಅಡೆತಡೆಗಳಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಈ ಯೋಜನೆ ಪರಿಗಣಿಸಲಾಗುತ್ತಿದೆ. ಈ ಯೋಜನೆ ಯಶಸ್ವಿಯಾಗಿ ಜಾರಿಯಾದರೆ, ಭಾರತಕ್ಕೆ ಭವಿಷ್ಯದಲ್ಲಿ ಗ್ಯಾಸ್ ಸಂಬಂಧಿತ ಸಂಕಟಗಳಿಂದ ಬಹುಪಾಲು ರಕ್ಷಣೆ ದೊರಕಬಹುದು. ಏಕೆಂದರೆ ಭಾರತವು ತನ್ನ ಇಂಧನದ ಬಹುಪಾಲನ್ನು ಕೊಲ್ಲಿ ಪ್ರದೇಶದಿಂದ ಆಮದು ಮಾಡಿಕೊಳ್ಳುತ್ತದೆ ಮತ್ತು ಹೆಚ್ಚಿನ ಸಾಗಣೆಗಳು ಸೂಕ್ಷ್ಮವಾದ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತವೆ.

 

ಪ್ರಸ್ತುತ, ಭಾರತ ಸರ್ಕಾರವು ಈ ಪ್ರಸ್ತಾವನೆಯನ್ನು ಪರಿಗಣಿಸುತ್ತಿದೆ, ಆದರೆ ಇದು ಇನ್ನೂ ಅಂತಿಮವಾಗಿ ಅನುಮೋದನೆಗೊಂಡ ಅಥವಾ ಕಾರ್ಯಗತಗೊಳಿಸಲಾದ ಯೋಜನೆಯಲ್ಲ. ಅತೀ ಹೆಚ್ಚು ಆಳವಿರುವ ಸಮುದ್ರದಲ್ಲಿ ಪೈಪ್ ಲೈನ್ ಮೂಲಕ ಇಷ್ಟು ದೂರ ಗ್ಯಾಸ್ ಪೂರೈಕೆ ಸಾಧ್ಯವೇ ಎಂಬುವುದು ಸಂಪೂರ್ಣ ಅಧ್ಯಯನ ನಂತರ ತಿಳಿಯಬೇಕಾಗಿದೆ.