16 June 2026 |

ಶಾಲಾ ಮಕ್ಕಳ ಆರೋಗ್ಯಕ್ಕೆ ಆದ್ಯತೆ: ಶೂ-ಸಾಕ್ಸ್ ಯೋಜನೆಯಲ್ಲಿ ಬದಲಾವಣೆಗೆ ಶಿಕ್ಷಣ ಇಲಾಖೆ ಚಿಂತನೆ

  • 15 Jun 2026 11:12:29 AM

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಶೂ ಮತ್ತು ಸಾಕ್ಸ್ ವಿತರಣಾ ಯೋಜನೆಯಲ್ಲಿ ಪರಿಷ್ಕರಣೆ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಗಂಭೀರವಾಗಿ ಚರ್ಚೆ ನಡೆಸುತ್ತಿದೆ. ಕೆಲವು ವಿದ್ಯಾರ್ಥಿಗಳಲ್ಲಿ ಕಾಲುಗಳಿಗೆ ಸಂಬಂಧಿಸಿದ ಸೋಂಕುಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಹೊಸ ಕ್ರಮಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

 

ಹವಾಮಾನ ಹಾಗೂ ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಶೂ ಅಥವಾ ಚಪ್ಪಲಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಈ ಕುರಿತು ಜಿಲ್ಲೆಯ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಲು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

 

ಮಳೆಗಾಲದಲ್ಲಿ ಸಾಕ್ಸ್ ಒದ್ದೆಯಾಗುವುದು, ಶೂಗಳನ್ನು ದೀರ್ಘಕಾಲ ಧರಿಸುವುದರಿಂದ ಅಸ್ವಸ್ಥತೆ ಉಂಟಾಗುವುದು ಸೇರಿದಂತೆ ಹಲವು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿರುವುದಾಗಿ ವರದಿಯಾಗಿದೆ. ಈ ಕಾರಣಗಳಿಂದ ಕೆಲವು ಪ್ರದೇಶಗಳಲ್ಲಿ ಚಪ್ಪಲಿ ವಿತರಣೆ ಹೆಚ್ಚು ಉಪಯುಕ್ತವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

 

ಪ್ರಸ್ತುತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಒಂದು ಜೋಡಿ ಶೂ ಮತ್ತು ಎರಡು ಜೋಡಿ ಸಾಕ್ಸ್ ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರೂ., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ. ಹಾಗೂ 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ವೆಚ್ಚವನ್ನು ಸರ್ಕಾರ ನಿಗದಿಪಡಿಸಿತ್ತು. ಇದೀಗ ವಿದ್ಯಾರ್ಥಿಗಳ ಆರೋಗ್ಯ ಮತ್ತು ಅನುಕೂಲತೆಯನ್ನು ಪರಿಗಣಿಸಿ ಯೋಜನೆಯಲ್ಲಿ ಬದಲಾವಣೆ ತರಲು ಇಲಾಖೆ ಮುಂದಾಗಿದೆ.