ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸುರಕ್ಷಿತ ಇಳಿಯುವಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅತ್ಯಾಧುನಿಕ ಸಿಎಟಿ-1 ಅಪ್ರೋಚ್ ಲೈಟಿಂಗ್ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲಾಗಿದೆ. ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿರುವ ಮಂಗಳೂರಿನಲ್ಲಿ ಈ ಹೊಸ ತಂತ್ರಜ್ಞಾನವು ಪೈಲಟ್‌ಗಳಿಗೆ ಮಹತ್ವದ ನೆರವಾಗಲಿದೆ.
ವಿಶೇಷವಾಗಿ ಮಳೆ, ಮಂಜು ಅಥವಾ ಕಡಿಮೆ ಗೋಚರತೆಯಂತಹ ಪರಿಸ್ಥಿತಿಗಳಲ್ಲಿ ವಿಮಾನವನ್ನು ರನ್‌ವೇಗೆ ನಿಖರವಾಗಿ ಮಾರ್ಗದರ್ಶನ ಮಾಡಲು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಲ್ಯಾಂಡಿಂಗ್‌ನ ಕೊನೆಯ ಹಂತದಲ್ಲಿ ಪೈಲಟ್‌ಗಳಿಗೆ ಸ್ಪಷ್ಟ ದೃಶ್ಯ ಸೂಚನೆಗಳನ್ನು ನೀಡುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಯೋಜನೆಯ ಭಾಗವಾಗಿ ವಿಶೇಷ ವಿನ್ಯಾಸದ ಎತ್ತರದ ಗೋಪುರಗಳ ಮೇಲೆ ಆಧುನಿಕ ಏರ್‌ಫೀಲ್ಡ್ ಲೈಟಿಂಗ್ ಇಂಟೆಲಿಜೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ರನ್‌ವೇಯಿಂದ ಸುಮಾರು 900 ಮೀಟರ್ ದೂರದವರೆಗೆ ಬೆಳಕಿನ ವ್ಯವಸ್ಥೆ ವಿಸ್ತರಿಸಿದ್ದು, ವಿಮಾನಗಳ ಮಾರ್ಗದರ್ಶನಕ್ಕೆ ನೆರವಾಗಲಿದೆ.
ಗೋಪುರಗಳ ವಿನ್ಯಾಸ ಅತ್ಯಂತ ಸಂಕೀರ್ಣ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಕೆಲವು ಗೋಪುರಗಳು ಕುತುಬ್ ಮಿನಾರ್‌ಗಿಂತಲೂ ಹೆಚ್ಚಿನ ಎತ್ತರ ಹೊಂದಿವೆ. ಈ ರೀತಿಯ ಸೌಲಭ್ಯವನ್ನು ಹೊಂದಿರುವ ಏಷ್ಯಾದ ಎರಡನೇ ವಿಮಾನ ನಿಲ್ದಾಣವಾಗಿದೆ.





