ಚಾಮರಾಜನಗರ: ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಅದ್ವಿತಾ (4) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಆಟವಾಡುತ್ತಿದ್ದ ಅದ್ವಿತಾ, ನೀರು ಕುಡಿಯುವ ಉದ್ದೇಶದಿಂದ ಅಡುಗೆ ಕೋಣೆಗೆ ತೆರಳಿದ್ದಳು. ಆ ವೇಳೆ ಅಲ್ಲಿ ಚಾಲನೆಯಲ್ಲಿದ್ದ ಗ್ರೈಂಡರ್‌ನ್ನು ಸ್ಪರ್ಶಿಸಿದ್ದಾಳೆ ಎಂದು ತಿಳಿದುಬಂದಿದೆ.
ಗ್ರೈಂಡರ್‌ಗೆ ವಿದ್ಯುತ್ ಪ್ರವಹಿಸಿದ್ದರಿಂದ ಬಾಲಕಿಗೆ ತೀವ್ರ ಶಾಕ್ ತಗುಲಿದ್ದು, ತಕ್ಷಣವೇ ಆಕೆ ಅಸ್ವಸ್ಥಳಾಗಿದ್ದಾಳೆ. ಇದನ್ನು ಗಮನಿಸಿದ ಪೋಷಕರು ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಪೋಷಕರ ಕಣ್ಣೆದುರೇ ಮಗಳು ಅಕಾಲಿಕವಾಗಿ ಸಾವನ್ನಪ್ಪಿರುವುದು ಕುಟುಂಬವನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ. ಈ ಘಟನೆ ಗ್ರಾಮಸ್ಥರಲ್ಲಿಯೂ ಬೇಸರ ಮೂಡಿಸಿದ್ದು, ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಪ್ರಕರಣ ಸಂಬಂಧ ಪೊಲೀಸರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





