ಮಂಡ್ಯ: ಜಿಲ್ಲೆಯ ಪಾಂಡವಪುರದ ಎಂ. ಭರತ್ ಅವರ ಮಾರ್ಗದರ್ಶನದಲ್ಲಿ, ಸ್ಥಳೀಯ ಮೆಕಾನಿಕ್ ಮಹಮ್ಮದ್ ಆರಿಫ್ ತಮ್ಮ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕೇವಲ 4ನೇ ತರಗತಿಯವರೆಗೆ ಶಿಕ್ಷಣ ಪಡೆದಿರುವ ಆರಿಫ್, ತನ್ನ ಕೈಚಳಕ ಮತ್ತು ತಾಂತ್ರಿಕ ಕೌಶಲ್ಯದ ಮೂಲಕ ಹಳೆಯ ‘ಮಾರುತಿ 800’ ಕಾರನ್ನು ಐಷಾರಾಮಿ ‘ಲ್ಯಾಂಬೋರ್ಗಿನಿ’ ಮಾದರಿಯ ಕಾರಿನಂತೆ ಮಾಡಿಫೈ ಮಾಡಿದ್ದಾರೆ.
ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿನ ವಿನ್ಯಾಸವನ್ನು ಆಧಾರವಾಗಿಟ್ಟುಕೊಂಡು, ಹಳೆಯ ಕಾರಿನ ಹೊರ ವಿನ್ಯಾಸ, ಬಾಗಿಲುಗಳು, ಬಾಡಿ ಶೈಲಿ ಹಾಗೂ ಹಲವು ಭಾಗಗಳನ್ನು ಸಂಪೂರ್ಣವಾಗಿ ಬದಲಾಯಿಸಿ ಈ ವಿಶಿಷ್ಟ ಮಾದರಿಯನ್ನು ನಿರ್ಮಿಸಲಾಗಿದೆ.
ಈ ಸೃಜನಾತ್ಮಕ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸೀಮಿತ ಸಂಪನ್ಮೂಲಗಳ ನಡುವೆಯೂ ಅಪಾರ ಪ್ರತಿಭೆಯನ್ನು ತೋರಿಸಿರುವ ಮಹಮ್ಮದ್ ಆರಿಫ್ ಅವರ ಸಾಧನೆ ಅನೇಕರಿಗೆ ಪ್ರೇರಣೆಯಾಗಿದೆ.
ಸ್ಥಳೀಯರು ಹಾಗೂ ವಾಹನ ಪ್ರಿಯರು ಈ ವಿಶೇಷ ಕಾರನ್ನು ವೀಕ್ಷಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದು, ಪ್ರತಿಭೆಗೆ ಶಿಕ್ಷಣಕ್ಕಿಂತ ಆಸಕ್ತಿ ಮತ್ತು ಪರಿಶ್ರಮವೇ ಮುಖ್ಯ ಎಂಬುದನ್ನು ಈ ಸಾಧನೆ ಮತ್ತೊಮ್ಮೆ ಸಾಬೀತುಪಡಿಸಿದೆ.





