07 July 2026 |

ಕೊಲ್ಲೂರು ದೇವಸ್ಥಾನದಲ್ಲಿ ಕಳವು ಪ್ರಕರಣ: ಮೂವರು ಮಹಿಳೆಯರು ಪೊಲೀಸ್ ಬಲೆಗೆ

  • 06 Jul 2026 10:13:07 PM

ಕೊಲ್ಲೂರು: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ಹಣ ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು ಪೊಲೀಸರು ಶೀಘ್ರವೇ ಭೇದಿಸಿ, ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.

 

ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿಗಳಾದ ನೇತ್ರಾವತಿ, ಶಾರದಾ ಮತ್ತು ದುರ್ಗಮ್ಮ ಎಂದು ಗುರುತಿಸಲಾಗಿದೆ.

 

ದೇವಿಯ ದರ್ಶನಕ್ಕಾಗಿ ದೇವಸ್ಥಾನಕ್ಕೆ ಆಗಮಿಸಿದ್ದ ನಿಮಿಷಾ ಎಂಬ ಭಕ್ತೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ₹80 ಸಾವಿರ ನಗದು ಕಾಣೆಯಾಗಿತ್ತು. ಘಟನೆ ಬಳಿಕ ದೇವಸ್ಥಾನದ ಸುತ್ತಮುತ್ತ ವ್ಯಾಪಕವಾಗಿ ಹುಡುಕಾಟ ನಡೆಸಿದರೂ ಹಣ ಪತ್ತೆಯಾಗಿರಲಿಲ್ಲ.

 

ಹಣ ಕಳೆದುಕೊಂಡ ಭಕ್ತೆ ಬಳಿಕ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ತನಿಖೆ ಆರಂಭಿಸಿ, ದೇವಸ್ಥಾನದ ಸಿಸಿಟಿವಿ ದೃಶ್ಯಗಳು ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದ ಚಿತ್ರಗಳನ್ನು ಪರಿಶೀಲಿಸಿದರು.

 

ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಕಳ್ಳತನದಲ್ಲಿ ಭಾಗಿಯಾಗಿದ್ದ ಮೂವರು ಮಹಿಳೆಯರ ಗುರುತು ಪತ್ತೆಯಾಗಿ, ಘಟನೆ ನಡೆದ 24 ಗಂಟೆಗಳೊಳಗೆ ಅವರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾದರು.

 

ಪೊಲೀಸ್ ಮಾಹಿತಿಯ ಪ್ರಕಾರ, ಬಂಧಿತ ದುರ್ಗಮ್ಮ ವಿರುದ್ಧ ಈಗಾಗಲೇ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಶಾರದಾ ವಿರುದ್ಧ ಮೂರು ಪ್ರಕರಣಗಳಿವೆ. ಆರೋಪಿಗಳನ್ನು ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.