21 September 2026 |

ಅಕ್ರಮ ಮರಳು ಸಂಗ್ರಹಣೆ ಮೇಲೆ ವಿಟ್ಲ ಪೊಲೀಸರ ದಾಳಿ: ಇಬ್ಬರು ವಶಕ್ಕೆ

  • 20 Jul 2026 12:27:35 PM

ಬಂಟ್ವಾಳ: ಹೊಳೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ದೊಡ್ಡ ಪ್ರಮಾಣದ ಮರಳನ್ನು ಜಪ್ತಿ ಮಾಡಿದ್ದಾರೆ.

 

ವಿಟ್ಲ ಕಸಬಾ ಗ್ರಾಮದ ಕಂಬಳಬೆಟ್ಟು ನೆಕ್ಕರೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕುಳ ಗ್ರಾಮದ ಕಾರ್ಯಾಡಿ ನಿವಾಸಿ ಮಹಮ್ಮದ್ ಹಾಗೂ ಒಕ್ಕೆತ್ತೂರು ನಿವಾಸಿ ಶರೀಫ್ ಅವರು ಹೊಳೆಯಿಂದ ಮರಳನ್ನು ಗೋಣಿ ಚೀಲಗಳಲ್ಲಿ ತುಂಬಿ ಸಂಗ್ರಹಿಸುತ್ತಿದ್ದರೆಂದು ಆರೋಪಿಸಲಾಗಿದೆ.

 

ಪೊಲೀಸರಿಗೆ ದೊರೆತ ಖಚಿತ ಸುಳಿವಿನ ಮೇರೆಗೆ ವಿಟ್ಲ ಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದ್ದು, ಸುಮಾರು 60 ಗೋಣಿ ಚೀಲಗಳಲ್ಲಿದ್ದ ಮರಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.