21 July 2026 |

ಚೆನ್ನಮ್ಮ ಅಂತ್ಯಸಂಸ್ಕಾರ ಹಿನ್ನೆಲೆ: ಹಾಸನದಲ್ಲಿ 5 ಹೆಲಿಪ್ಯಾಡ್‌ಗಳ ಸಿದ್ಧತೆ

  • 20 Jul 2026 03:56:10 PM

ಹಾಸನ: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಸಂಸ್ಕಾರ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ವ್ಯಾಪಕ ಭದ್ರತಾ ಹಾಗೂ ಆಡಳಿತಾತ್ಮಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ದೇಶದ ವಿವಿಧ ಭಾಗಗಳಿಂದ ರಾಜಕೀಯ ಗಣ್ಯರು, ಕೇಂದ್ರ ಹಾಗೂ ರಾಜ್ಯದ ಸಚಿವರು ಸೇರಿದಂತೆ ಹಲವು ವಿಐಪಿಗಳು ಆಗಮಿಸುವ ನಿರೀಕ್ಷೆಯಿರುವುದರಿಂದ, ಅವರ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ ಐದು ತಾತ್ಕಾಲಿಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಿದೆ. 

 

ಹರದನಹಳ್ಳಿ, ಹೊಳೆನರಸೀಪುರ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ಹೆಲಿಕಾಪ್ಟರ್‌ಗಳ ಸುರಕ್ಷಿತ ಇಳಿಯುವಿಕೆ ಹಾಗೂ ಹಾರಾಟಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತ್ಯಸಂಸ್ಕಾರ ನಡೆಯುವ ಸ್ಥಳದ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಕಾಪಾಡಲು, ವಾಹನ ಸಂಚಾರ ನಿಯಂತ್ರಣ ಹಾಗೂ ಜನಸಂದಣಿಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಶೇಷ ಪೊಲೀಸ್ ಬಂದೋಬಸ್ತ್‌ ಸಹ ನಿಯೋಜಿಸಲಾಗಿದೆ.

 

ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾಹಿತಿ ನೀಡಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರ ಭದ್ರತೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲಾಡಳಿತದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಅಂತ್ಯಸಂಸ್ಕಾರ ಕಾರ್ಯಕ್ರಮವು ರಾಜ್ಯ ಗೌರವಗಳೊಂದಿಗೆ ಶಾಂತಿಯುತವಾಗಿ ನಡೆಯುವಂತೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.