ದಾವಣಗೆರೆ: ತಮ್ಮ ತಾಯಿಯ ಸಾವಿನ ಪ್ರಕರಣದಲ್ಲಿ ನ್ಯಾಯ ಸಿಗುತ್ತಿಲ್ಲ ಎಂಬ ಅಸಮಾಧಾನದಿಂದ ಇಬ್ಬರು ಪುತ್ರರು ಮೂರು ತಿಂಗಳ ಹಿಂದೆ ಸಮಾಧಿ ಮಾಡಿದ್ದ ತಾಯಿಯ ಶವವನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲು ಯತ್ನಿಸಿದ ಅಪರೂಪದ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
ದಾವಣಗೆರೆ ಸಮೀಪದ ಅದಾಪುರ ಗ್ರಾಮದ ಈರಮ್ಮ ಅವರು ಏಪ್ರಿಲ್ 29ರಂದು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣವನ್ನು ಆರಂಭದಲ್ಲಿ ಪೊಲೀಸರು ಹಾಗೂ ವೈದ್ಯರು ಆತ್ಮಹತ್ಯೆ ಎಂದು ಪರಿಗಣಿಸಿ ದಾಖಲಿಸಿದ್ದರು. ಆದರೆ, ಮೃತೆಯ ಪುತ್ರರಾದ ಮಂಜುನಾಥ್ ಮತ್ತು ವೆಂಕಟೇಶ್ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದರು.
ಗ್ರಾಮದಲ್ಲಿ ಚರಂಡಿ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಈರಮ್ಮ ಅವರಿಗೆ ಸಂಬಂಧಿಕರಾದ ಕರಿಯಪ್ಪ, ಭದ್ರಾ, ಶಕುಂತಲಾ ಸೇರಿದಂತೆ ಕೆಲವರೊಂದಿಗೆ ವಿವಾದ ಉಂಟಾಗಿತ್ತು. ಇದೇ ವೈಷಮ್ಯದ ಹಿನ್ನೆಲೆಯಲ್ಲಿ ತಾಯಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ, ಬಳಿಕ ಆತ್ಮಹತ್ಯೆಯಂತೆ ಚಿತ್ರಿಸಲಾಗಿದೆ ಎಂದು ಪುತ್ರರು ಆರೋಪಿಸಿದ್ದಾರೆ. ಮೃತದೇಹದಲ್ಲಿ ಗಾಯಗಳ ಗುರುತುಗಳಿದ್ದವು ಎಂದು ಹೇಳಿ ಅವರು ಪೊಲೀಸ್ ಠಾಣೆಯಲ್ಲೂ ದೂರು ಸಲ್ಲಿಸಿದ್ದರು.
ಸ್ಥಳೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಈರಮ್ಮ ಅವರ ಶವವನ್ನು ಸಮಾಧಿ ಮಾಡಲಾಗಿತ್ತು. ಆದರೆ, ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸಲಾಗುತ್ತಿಲ್ಲ ಹಾಗೂ ಮರು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ ಪುತ್ರರು, ತಡರಾತ್ರಿ ಸಮಾಧಿಯನ್ನು ಅಗೆದು ತಾಯಿಯ ಶವವನ್ನು ಹೊರತೆಗೆದಿದ್ದಾರೆ.
ನಂತರ ಶವವನ್ನು ಬಟ್ಟೆಯಲ್ಲಿ ಸುತ್ತಿ ಬೈಕ್‌ನಲ್ಲಿ ಇರಿಸಿಕೊಂಡು ದಾವಣಗೆರೆ ಜಿಲ್ಲಾಸ್ಪತ್ರೆಯತ್ತ ಹೊರಟಿದ್ದರು. ಈ ವೇಳೆ ದಾವಣಗೆರೆ ಸಮೀಪ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸ್ಥಳಕ್ಕೆ ಬಂದ ಸಾರ್ವಜನಿಕರು ಗಾಯಾಳುಗಳಿಗೆ ನೆರವಾಗಲು ಮುಂದಾದಾಗ ಅವರೊಂದಿಗೆ ತಂದಿದ್ದ ಶವವನ್ನು ಕಂಡು ಅಚ್ಚರಿಗೊಂಡಿದ್ದಾರೆ.





