06 August 2026 |

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ತೀವ್ರ: ಜಲಾಶಯಗಳಿಗೆ ಭಾರಿ ಒಳಹರಿವು, ಕರಾವಳಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ

  • 25 Jul 2026 12:12:43 PM

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಮತ್ತೆ ಹೆಚ್ಚಾಗಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ನೀರಿನ ಸಂಗ್ರಹ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

 

ಹಾರಂಗಿ ಜಲಾಶಯ ಭರ್ತಿಯತ್ತ ಕೊಡಗು ಜಿಲ್ಲೆಯ ಹಾರಂಗಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯ ಶೀಘ್ರದಲ್ಲೇ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆ ಇದ್ದು, ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ನೀರು ಹೊರಬಿಡುವ ಸಾಧ್ಯತೆ ಇದೆ. ಆರಂಭಿಕ ಹಂತದಲ್ಲಿ 3,000 ರಿಂದ 5,000 ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಕೃಷ್ಣಾ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ಕೃಷ್ಣಾ ನದಿಯ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೊರಹರಿವಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇರುವುದರಿಂದ ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ನದಿಯೊಳಗೆ ಜನರು ಮತ್ತು ಜಾನುವಾರುಗಳು ಇಳಿಯದಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

 

ಬಸವಸಾಗರ ಜಲಾಶಯಕ್ಕೆ ಸದ್ಯ ಸುಮಾರು 70 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹಂತ ಹಂತವಾಗಿ 30 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ಭಾಗದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

 

ಉತ್ತರ ಕನ್ನಡದಲ್ಲಿ ಪ್ರವಾಹದ ಚಿತ್ರಣ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಳವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗೇರಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದ ಬರೂರು ಹೊಳೆ ಉಕ್ಕಿ ಹರಿದಿದೆ. ಪರಿಣಾಮ ಭತ್ತದ ಗದ್ದೆಗಳು, ತೋಟಗಳು ಮತ್ತು ಸಮೀಪದ ರಸ್ತೆ ನೀರಿನಲ್ಲಿ ಮುಳುಗಿದ್ದು, ಸ್ಥಳೀಯರಿಗೆ ತೊಂದರೆ ಉಂಟಾಗಿದೆ.

 

ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಕಾರಣ ಪ್ರವಾಹದೊಂದಿಗೆ ಹಾವುಗಳೂ ಹರಿದು ಬರುತ್ತಿವೆ. ಹೊಸಗದ್ದೆ ಸಮೀಪ ಸುಮಾರು 12 ಅಡಿ ಉದ್ದದ ಹೆಬ್ಬಾವೊಂದು ತೇಲಿ ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

 

ದಕ್ಷಿಣ ಕನ್ನಡದಲ್ಲಿ ಆರೆಂಜ್ ಅಲರ್ಟ್ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶ ಹೊರಡಿಸಿದ್ದಾರೆ.