ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳಿಗೆ ಆಧುನಿಕ ಕೌಶಲಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈಗ ರಾಜ್ಯದ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ವಿಷಯವನ್ನು ಬೋಧಿಸಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಬಲಪಡಿಸಲು ಕಂಪ್ಯೂಟರ್ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ, ತಂತ್ರಜ್ಞಾನದ ಬೆಳವಣಿಗೆಗೆ ಹೊಂದಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೊಸ ತಲೆಮಾರಿನ ಕೌಶಲಗಳನ್ನು ಕಲಿಸುವ ಉದ್ದೇಶದಿಂದ 2026–27ನೇ ಶೈಕ್ಷಣಿಕ ವರ್ಷದಿಂದ ಎಐ ಕೋರ್ಸ್ ಅನ್ನು ಪರಿಚಯಿಸಲಾಗುತ್ತಿದೆ.
2026–27ರಿಂದ ಎಐ ಪಾಠ ಆರಂಭ
ಸಮಗ್ರ ಶಿಕ್ಷಣ ಇಲಾಖೆಯ ಯೋಜನೆಯಂತೆ, 2026–27ನೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ವಿಷಯದ ಬೋಧನೆ ಆರಂಭವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸುವ ಜೊತೆಗೆ ವಿದ್ಯಾರ್ಥಿಗಳನ್ನು ಭವಿಷ್ಯದ ಉದ್ಯೋಗಾವಕಾಶಗಳಿಗೆ ಸಜ್ಜುಗೊಳಿಸುವ ಉದ್ದೇಶವೂ ಈ ಯೋಜನೆಯ ಹಿಂದಿದೆ.
1,642 ಶಾಲೆಗಳಲ್ಲಿ ಜಾರಿ
ಒಟ್ಟು 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಈ ಕೋರ್ಸ್ ಅನುಷ್ಠಾನಗೊಳ್ಳಲಿದೆ. ಇದರಲ್ಲಿ 2026–27ನೇ ಸಾಲಿನಲ್ಲಿ ಹೊಸದಾಗಿ ಅನುಮೋದನೆ ಪಡೆದ 1,180 ಸರ್ಕಾರಿ ಪ್ರೌಢಶಾಲೆಗಳು, 2024–25 ಹಾಗೂ 2025–26ನೇ ಶೈಕ್ಷಣಿಕ ವರ್ಷಗಳಲ್ಲಿ ಅನುಮೋದನೆಗೊಂಡಿರುವ 381 ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಷನ್ಸ್ ಫ್ರೇಮ್‌ವರ್ಕ್ (ಎನ್‌ಎಸ್‌ಕ್ಯೂಎಫ್) ಶಾಲೆಗಳು ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 81 ಸಿಂಗಲ್ ಸೆಕ್ಟರ್ ಶಾಲೆಗಳು ಸೇರಿವೆ.




