26 July 2026 |

ವಿದ್ಯಾರ್ಥಿನಿ ಹತ್ಯೆ: ಲಿವ್-ಇನ್ ಸಂಗಾತಿ ಬಂಧನ, ಪಾರ್ಥಿವ ಶರೀರ ಭಾರತಕ್ಕೆ ತರಲು ನಿಧಿ ಸಂಗ್ರಹ

  • 25 Jul 2026 01:06:46 PM

ಉನ್ನತ ಶಿಕ್ಷಣದ ಕನಸನ್ನು ಹೊತ್ತು ಕೆನಡಾಕ್ಕೆ ತೆರಳಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಅಲ್ಲಿ ಹತ್ಯೆಯಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆಕೆಯ ಲಿವ್-ಇನ್ ಸಂಗಾತಿಯನ್ನು ಪೊಲೀಸರು ಬಂಧಿಸಿದ್ದಾರೆ.

 

ಪಂಜಾಬ್ ಮೂಲದ 23 ವರ್ಷದ ದಮನ್‌ಪ್ರೀತ್ ಕೌರ್ ಮೃತ ವಿದ್ಯಾರ್ಥಿನಿಯಾಗಿದ್ದು, 22 ವರ್ಷದ ರಿತೀಶ್ ಕುಮಾರ್ ವಿರುದ್ಧ ಕೊಲೆ ಆರೋಪ ದಾಖಲಾಗಿದೆ. ಇಬ್ಬರೂ ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

 

ಸುಮಾರು ಐದು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಕೆನಡಾಕ್ಕೆ ತೆರಳಿದ್ದ ದಮನ್‌ಪ್ರೀತ್, ಜುಲೈ 9ರಂದು ಎಡ್ಮಂಟನ್‌ನ ಸಿಲ್ವರ್‌ಬೆರಿ ಪ್ರದೇಶದ ನಿವಾಸದಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು.

 

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದಾರೆ. ಬಳಿಕ ರಿತೀಶ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕೃತ್ಯವನ್ನು ತಾನೇ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಇದೇ ವೇಳೆ ದಮನ್‌ಪ್ರೀತ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು 20,000 ಕೆನಡಿಯನ್ ಡಾಲರ್‌ಗಳ ಅಗತ್ಯವಿದೆ. ಕುಟುಂಬ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ, GoFundMe ಮೂಲಕ ನಿಧಿ ಸಂಗ್ರಹ ಅಭಿಯಾನ ಆರಂಭಿಸಲಾಗಿದ್ದು, ಈಗಾಗಲೇ ಸುಮಾರು ₹11 ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.