ರಾಮನಗರ: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಸ್ವಾಧೀನ ನಡೆಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿರುವ ಬಿಡದಿ ಹೋಬಳಿಯ ಕೊಡಿಯಾಲ-ಕರೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು, ಸರ್ಕಾರ ಮುಂದಾದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚೂಡಹಳ್ಳಿ, ಸೋಮನಹಳ್ಳಿ, ಕೊಡಿಯಾಲ-ಕರೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿಯನ್ನು ಗುರುತಿಸಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ಕೊಡಿಯಾಲ-ಕರೇನಹಳ್ಳಿಯ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ರೈತರು ಪೂರ್ವಭಾವಿ ಸಭೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು.
ಸಭೆಯ ಬಳಿಕ ಮಾತನಾಡಿದ ರೈತ ಮುಖಂಡ ಕೊಡಿಯಾಲ ಸತೀಶ್, ವಿಮಾನ ನಿಲ್ದಾಣಕ್ಕಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಂಡರೆ ರೈತ ಕುಟುಂಬಗಳ ಜೀವನೋಪಾಯಕ್ಕೆ ತೀವ್ರ ಧಕ್ಕೆಯಾಗಲಿದೆ. ರೈತರ ಬದುಕು ಮತ್ತು ಫಲವತ್ತಾದ ಭೂಮಿಯನ್ನು ಬಲಿಕೊಡುವ ಅಭಿವೃದ್ಧಿಯನ್ನು ಒಪ್ಪುವುದಿಲ್ಲ. ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆಗಳನ್ನು ಘೋಷಿಸುವವರು ಭೂಮಿ ಕಳೆದುಕೊಳ್ಳುವ ರೈತರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಜಮೀನು ಮತ್ತು ಮನೆ ಕಳೆದುಕೊಂಡ ಬಳಿಕ ರೈತರು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಗೆ ಉತ್ತರ ನೀಡಬೇಕಿದೆ ಎಂದು ಅವರು ಹೇಳಿದರು.
ಈಗಾಗಲೇ ಕೈಗಾರಿಕೆಗಳು ಹಾಗೂ ಬಿಡದಿ ಟೌನ್‌ಶಿಪ್ ಯೋಜನೆಯಿಂದ ಈ ಭಾಗದ ಕೃಷಿ ಭೂಮಿಗೆ ಹಾನಿಯಾಗಿದೆ. ಇದೀಗ ವಿಮಾನ ನಿಲ್ದಾಣ ಯೋಜನೆಯ ಹೆಸರಿನಲ್ಲಿ ಉಳಿದಿರುವ ಕೃಷಿ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ರೈತರು ಆರೋಪಿಸಿದರು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳೀಯ ರೈತರು ಯಾವುದೇ ಬೇಡಿಕೆ ಸಲ್ಲಿಸಿಲ್ಲ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಸರ್ಕಾರ ಸೂಕ್ತ ಸ್ಪಂದನೆ ನೀಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ನದೀಮ್ ಪಾಷಾ ಮಾತನಾಡಿ, ಗ್ರಾಮವಾರು ಸಭೆಗಳನ್ನು ನಡೆಸಿ ರೈತರ ಅಭಿಪ್ರಾಯ ಹಾಗೂ ಸಹಿಗಳನ್ನು ಸಂಗ್ರಹಿಸಲಾಗುತ್ತಿದೆ. ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅಗತ್ಯವಿದ್ದರೆ ಪ್ರತಿಭಟನೆಯನ್ನು ವಿಸ್ತರಿಸಲಾಗುವುದು ಎಂದರು. ಭೂಮಿಯೇ ರೈತರ ಬದುಕಿನ ಆಧಾರವಾಗಿದ್ದು, ಪರಿಹಾರ ಹಣದಿಂದ ಅದರ ಮೌಲ್ಯ ಅಥವಾ ಜೀವನೋಪಾಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಕೆ.ಕರೇನಹಳ್ಳಿ, ಕೊಡಿಯಾಲ, ನಾರಾಯಣಪುರ, ಕತ್ತಾಳೆಪಾಳ್ಯ, ಕೆ.ಚೂಡಹಳ್ಳಿ, ನಾಗನಾಯಕನಹಳ್ಳಿ, ಹುತ್ತರಿ, ಸೀಗೆಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು. ರೈತ ಮುಖಂಡರಾದ ನರ್ಸರಿ ಸಿದ್ಧರಾಜು, ಟಿ. ಕೃಷ್ಣಪ್ಪ, ಬೂದಿ ಒಡೆಯರಪಾಳ್ಯ ಸಿದ್ಧರಾಜು, ಕೊಡಿಯಾಲ ಶಾಂತಪ್ಪ, ಡಿ. ಗೋಪಾಲ್, ಶ್ರೀನಿವಾಸಯ್ಯ, ಗಂಗಾಧರ್, ಸಿದ್ಧಮಾರಯ್ಯ, ಮುನಿವೆಂಕಟಪ್ಪ, ವೆಂಕಟೇಶ್, ಚಂದ್ರಯ್ಯ, ನಾಗರಾಜು, ರುದಯ್ಯ, ಹೇಮಂತ್ ಹಾಗೂ ಕೆಂಚಣ್ಣ ಉಪಸ್ಥಿತರಿದ್ದರು.





