27 July 2026 |

ರಸ್ತೆ ಅಪಘಾತ ಸಂತ್ರಸ್ತರಿಗೆ ‘ಪಿಎಂ ರಾಹತ್’ ಯೋಜನೆ ಕಡ್ಡಾಯ ಜಾರಿ; ಆಸ್ಪತ್ರೆಗಳಿಗೆ ಸಂಸದ ಬ್ರಿಜೇಶ್ ಚೌಟ ಎಚ್ಚರಿಕೆ

  • 26 Jul 2026 01:31:18 PM

ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ದೊರಕಿಸಿ ಜೀವ ಉಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಪಿಎಂ ರಾಹತ್’ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಆರೋಗ್ಯ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

 

ಶಾಸಕ ವೇದವ್ಯಾಸ್ ಕಾಮತ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್. ತಿಮ್ಮಯ್ಯ, ಡಿ.ಸಿ.ಪಿ. ರವಿಶಂಕರ್, ಜಿಲ್ಲೆಯ ಪ್ರಮುಖ ಆಸ್ಪತ್ರೆಗಳ ಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಯೋಜನೆಯ ಅನುಷ್ಠಾನದ ಪ್ರಗತಿ ಮತ್ತು ಎದುರಾಗುತ್ತಿರುವ ಸವಾಲುಗಳ ಕುರಿತು ಸಂಸದರು ಮಾಹಿತಿ ಪಡೆದುಕೊಂಡರು.

 

ಸಭೆಯಲ್ಲಿ ಮಾತನಾಡಿದ ಬ್ರಿಜೇಶ್ ಚೌಟ ಅವರು, ರಸ್ತೆ ಅಪಘಾತಕ್ಕೊಳಗಾದವರನ್ನು ಯಾವುದೇ ವಿಳಂಬವಿಲ್ಲದೆ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಜಾರಿಗೆ ಬಂದಿರುವ ‘ಪಿಎಂ ರಾಹತ್’ ಯೋಜನೆಯನ್ನು ಜಿಲ್ಲೆಯಾದ್ಯಂತ ಸಮರ್ಪಕವಾಗಿ ಜಾರಿಗೊಳಿಸಿ ದಕ್ಷಿಣ ಕನ್ನಡವನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 

ತುರ್ತು ಪರಿಸ್ಥಿತಿಯಲ್ಲಿ ಅಪಘಾತ ಸಂತ್ರಸ್ತರನ್ನು ದಾಖಲಿಸಲು ಆಸ್ಪತ್ರೆಗಳು ನಿರಾಕರಿಸಿದರೆ ಅಥವಾ ನಿರ್ಲಕ್ಷ್ಯ ತೋರಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬುದನ್ನೂ ಒತ್ತಿಹೇಳಲಾಯಿತು.