27 July 2026 |

ಜೀವರಕ್ಷಕ ಆಂಬುಲೆನ್ಸ್‌ನಲ್ಲೇ ಮಾದಕ ದಂಧೆ ಆರೋಪ; ಬೆಳ್ತಂಗಡಿಯ ಜಲೀಲ್ ಬಾಬಾ ನಾಪತ್ತೆ

  • 26 Jul 2026 02:30:38 PM

ಬೆಳ್ತಂಗಡಿ: ಸಮಾಜಸೇವಕ ಹಾಗೂ ಆಂಬುಲೆನ್ಸ್ ಚಾಲಕನಾಗಿ ಬೆಳ್ತಂಗಡಿಯಲ್ಲಿ ಪರಿಚಿತರಾಗಿದ್ದ ಜಲೀಲ್ ಬಾಬಾ ವಿರುದ್ಧ ಇದೀಗ ಗಂಭೀರ ಮಾದಕವಸ್ತು ಸಾಗಾಟದ ಆರೋಪ ಕೇಳಿಬಂದಿದ್ದು, ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆತ ತಲೆಮರೆಸಿಕೊಂಡಿರುವುದು ಸಂಚಲನಕ್ಕೆ ಕಾರಣವಾಗಿದೆ.

 

ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು ₹5.5 ಕೋಟಿ ಮೌಲ್ಯದ ಎಂಡಿಎಂಎ (MDMA) ಮಾದಕವಸ್ತುವನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದ ತನಿಖೆ ವೇಳೆ ಬೆಳ್ತಂಗಡಿಯ ನಿವಾಸಿ ಹಾಗೂ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ (42) ಅವರ ಹೆಸರೂ ಹೊರಬಂದಿದೆ.

 

ಪೊಲೀಸರ ಮಾಹಿತಿ ಪ್ರಕಾರ, ಪ್ರಕರಣದಲ್ಲಿ ಒಟ್ಟು ನಾಲ್ವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ಮೂವರು ಈಗಾಗಲೇ ಬಂಧಿತರಾಗಿದ್ದಾರೆ. ಆದರೆ ಜಲೀಲ್ ಬಾಬಾ ಮಾತ್ರ ಪ್ರಕರಣ ಬೆಳಕಿಗೆ ಬಂದ ಬಳಿಕ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಮಂಗಳೂರು ಸಿಸಿಬಿ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.

 

ಜಲೀಲ್ ಬಾಬಾ ಸಮಾಜಸೇವೆಯ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ನಡೆಸುತ್ತಿದ್ದು, ಸ್ಥಳೀಯವಾಗಿ ಅನೇಕರಿಗೆ ಪರಿಚಿತರಾಗಿದ್ದು, ತುರ್ತು ಸಂದರ್ಭಗಳಲ್ಲಿ ನೆರವಾಗುತ್ತಿದ್ದ ಕಾರಣ ಜನರು ಆತನನ್ನು ಪ್ರಶಂಸಿಸುತ್ತಿದ್ದರು. ಆದರೆ ಇದೀಗ ಇದೇ ಆಂಬುಲೆನ್ಸ್‌ನ್ನು ಬಳಸಿಕೊಂಡು ಮಾದಕವಸ್ತು ಸಾಗಾಟ ನಡೆಸಲಾಗುತ್ತಿತ್ತು ಎಂಬ ಆರೋಪ ತನಿಖೆಯಲ್ಲಿ ಕೇಳಿಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

 

ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಪರಾರಿಯಾಗಿರುವ ಜಲೀಲ್ ಬಾಬಾನ ಬಂಧನದ ಬಳಿಕ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.