ಮಳೆಯ ಸಂದರ್ಭದಲ್ಲಿ ವಾಹನಗಳನ್ನು ಅತಿವೇಗದಲ್ಲಿ ಚಲಾಯಿಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ದುರಂತವೇ ಮತ್ತೊಂದು ಉದಾಹರಣೆಯಾಗಿದೆ. ಕೆಲವರ ಬೇಜವಾಬ್ದಾರಿಯುತ ಚಾಲನೆಯಿಂದ ಅಮಾಯಕರು ಜೀವ ಕಳೆದುಕೊಳ್ಳಬೇಕಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಲ್ಲಪುರಂ: ಕೇರಳದ ಮಲ್ಲಪುರಂ ಜಿಲ್ಲೆಯ ಕುಟ್ಟಿಪುರಂ ಸಮೀಪ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೊಯಿಕೋಡ್‌ನಿಂದ ತ್ರಿಶೂರ್‌ಗೆ ತೆರಳುತ್ತಿದ್ದ ಖಾಸಗಿ ಲಿಮಿಟೆಡ್ ಸ್ಟಾಪ್ ಬಸ್ ಮಳೆಯಿಂದ ಜಾರುವ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ, ಎದುರುಭಾಗದಲ್ಲಿ ದುರಸ್ತಿ ಕಾರಣ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಬಿದ್ದಿದೆ. ಈ ದುರಂತದಲ್ಲಿ ಓರ್ವರು ಸ್ಥಳದಲ್ಲೇ ಮೃತಪಟ್ಟಿದ್ದು, 26ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಸ್ಥಳೀಯರ ಪ್ರಕಾರ, ಭಾರಿ ಮಳೆಯ ನಡುವೆಯೂ ಬಸ್ ಅತಿವೇಗದಲ್ಲಿ ಚಲಾಯಿಸಲಾಗುತ್ತಿತ್ತು. ಚಾಲಕರ ನಿರ್ಲಕ್ಷ್ಯವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದೆ. ಘಟನೆಯ ಬಳಿಕ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.
ಈ ಘಟನೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





