ವಿಟ್ಲ: ಬಂಟ್ವಾಳ ತಾಲೂಕಿನ ಇಡ್ತಿದು ಗ್ರಾಮದ ಕೋಲ್ಪೆ ಕೊಡಂಗೆ ಪ್ರದೇಶದಲ್ಲಿ ಒಂದೇ ರಾತ್ರಿ ಸರಣಿ ಕಳ್ಳತನದ ಘಟನೆಗಳು ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧರೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿರುವುದರ ಜೊತೆಗೆ ಸಮೀಪದ ಮನೆಯಿಂದ ಆ್ಯಕ್ಟಿವಾ ಸ್ಕೂಟರ್‌ನ್ನೂ ಕಳವು ಮಾಡಿದ್ದಾರೆ.
ಕೋಲ್ಪೆ ಕೊಡಂಗೆ ನಿವಾಸಿಯಾಗಿರುವ ನಿವೃತ್ತ ವೈದ್ಯ ಡಾ. ಪುಂಡಿಕಾಯಿ ಸೂರ್ಯನಾರಾಯಣ ಭಟ್ (79) ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ದುಷ್ಕರ್ಮಿಗಳು ಮನೆಯ ಹಿಂಭಾಗಿಲಿನ ಮೂಲಕ ಒಳನುಗ್ಗಿದ್ದು, ರಾತ್ರಿ ವೇಳೆ ಅವರು ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ಮನೆಯೊಳಗಿರುವುದನ್ನು ಗಮನಿಸಿದ್ದಾರೆ. ತಕ್ಷಣ ಎಚ್ಚರಗೊಂಡರೂ, ಕಳ್ಳರು ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ, ₹2,60,000 ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಹಿಂಭಾಗಿಲಿನ ಮೂಲಕ ಪರಾರಿಯಾಗಿದ್ದಾರೆ.
ಇದೇ ಘಟನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಕೋಲ್ಪೆ ಕೊಡಂಚರಪಾಲು ನಿವಾಸಿ ಆನಂದ ಸಫಲ್ಯ ಅವರ ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಆ್ಯಕ್ಟಿವಾ ಸ್ಕೂಟರ್‌ನ್ನು ಕೂಡ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಅಲ್ಲದೆ, ಸಮೀಪದ ಮತ್ತೊಂದು ಮನೆಯ ಅಂಗಳದಲ್ಲಿದ್ದ ಬೈಕ್‌ನ ಲಾಕ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಅದು ಯಶಸ್ವಿಯಾಗದ ಕಾರಣ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಇಡ್ತಿದು ನಿವಾಸಿ ಆನಂದ ಸಫಲ್ಯ ಅವರ ಮನೆಯಿಂದ ಕಳವಾಗಿದ್ದ ಆ್ಯಕ್ಟಿವಾ ಸ್ಕೂಟರ್ ನಂತರ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸೇತುವೆ ಸಮೀಪ ಪತ್ತೆಯಾಗಿದೆ. ವಾಹನವನ್ನು ವಶಕ್ಕೆ ಪಡೆದಿರುವ ವಿಟ್ಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.





