06 August 2026 |

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ; ಗುರುತು ಪತ್ತೆಗೆ ಪೊಲೀಸರ ಮನವಿ

  • 27 Jul 2026 12:41:49 PM

ಮಂಗಳೂರು: ನಗರದ ಸೆಂಟ್ರಲ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಸಂಖ್ಯೆ 4ಕ್ಕೆ ಬಂದ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನ ಅಂಗವಿಕಲರ ಬೋಗಿಯಲ್ಲಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

 

ಜುಲೈ 18ರಂದು ರೈಲು ನಿಲ್ದಾಣಕ್ಕೆ ಆಗಮಿಸಿದ ವೇಳೆ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರು. ಈ ಕುರಿತು ಸ್ಟೇಷನ್ ಮಾಸ್ಟರ್ ಆಕಾಶ್ ಕುಮಾರ್ ಮೀನಾ ಅವರು ತಕ್ಷಣ ರೈಲ್ವೆ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ವೈದ್ಯರು ಪರಿಶೀಲನೆ ನಡೆಸಿದ ಬಳಿಕ ವ್ಯಕ್ತಿ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಘಟನೆಗೆ ಸಂಬಂಧಿಸಿ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಕಲಂ 194ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

ಮೃತ ವ್ಯಕ್ತಿಯು ಸುಮಾರು 45 ವರ್ಷ ವಯಸ್ಸಿನವರಾಗಿದ್ದು, ಅಂದಾಜು 4.5 ಅಡಿ ಎತ್ತರ ಹೊಂದಿದ್ದರು. ಮಧ್ಯಮ ಮೈಕಟ್ಟು, ದುಂಡಗಿನ ಮುಖ ಹೊಂದಿದ್ದ ಅವರು, ಎರಡೂ ಕಾಲುಗಳು ಮೊಣಕಾಲಿನ ಕೆಳಭಾಗದಿಂದ ತುಂಡಾಗಿದ್ದವು. ಬಲಗೈಯಲ್ಲಿ “ಪೂಜಾರಿ ಅನಿಲ್” ಎಂಬ ಹಚ್ಚೆ ಗುರುತು ಇತ್ತು.

 

ಪತ್ತೆಯಾದ ವೇಳೆ ಅವರು ಸಿಮೆಂಟ್ ಬಣ್ಣದ ಜೆರ್ಸಿ, ಚೆಕ್ಸ್ ಶರ್ಟ್, ಕಪ್ಪು ಟಿ-ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬರ್ಮುಡಾ ಶಾರ್ಟ್ಸ್ ಧರಿಸಿದ್ದರು. ಅವರ ಬಳಿ ಸಿಕ್ಕಿದ್ದ ಸಣ್ಣ ನೋಟ್‌ಬುಕ್‌ನಲ್ಲಿ “ಅನಿಲ್ ಮಾರುತಿ”, “ಕೋಲ್ಕತ್ತಾ”, “ಮುಂಬೈ ಮಾಲಾಡ್ ಈಸ್ಟ್” ಹಾಗೂ “ಜಾಮ್ ರುಷಿ” ಎಂಬ ವಿವರಗಳು ನಮೂದಾಗಿದ್ದವು.

 

ಮೃತರ ಗುರುತು ಅಥವಾ ಅವರ ಕುಟುಂಬದವರ ಕುರಿತು ಮಾಹಿತಿ ಹೊಂದಿರುವವರು ಮಂಗಳೂರು ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಅಥವಾ ಇನ್ಸ್‌ಪೆಕ್ಟರ್ ಅವರನ್ನು 9480802121 ಅಥವಾ 9480800470 ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಅಲ್ಲದೆ, ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ 9480802140 ಅಥವಾ ಸ್ಥಿರ ದೂರವಾಣಿ 0824-2220559 ಮೂಲಕವೂ ಮಾಹಿತಿ ನೀಡಬಹುದಾಗಿದೆ.