06 August 2026 |

ಪತಿಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ; ಅಕ್ರಮ ಸಂಬಂಧ ಆರೋಪದಡಿ ಪತಿ ವಿರುದ್ಧ ದೂರು

  • 27 Jul 2026 02:33:34 PM

ಬೆಂಗಳೂರು: ಪತಿಯ ಅಕ್ರಮ ಸಂಬಂಧದಿಂದ ಮನನೊಂದಿದ್ದ 21 ವರ್ಷದ ಯುವತಿ ತನ್ನ ಏಳು ತಿಂಗಳ ಮಗುವಿನ ಎದುರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಸಂದ್ರದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

 

ಆತ್ಮಹತ್ಯೆ ಮಾಡಿಕೊಂಡವರನ್ನು ರಾಯಸಂದ್ರ ನಿವಾಸಿ ಸಾನಿಕಾ ಗೌಡ (21) ಎಂದು ಗುರುತಿಸಲಾಗಿದೆ. ಈ ಸಂಬಂಧ ಸಾನಿಕಾ ಅವರ ಪೋಷಕರು ಪತಿ ನಾಗರಾಜ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ದೌರ್ಜನ್ಯ ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ಮೂಲತಃ ಚಿಕ್ಕಮಗಳೂರಿನ ನಿವಾಸಿಯಾಗಿರುವ ನಾಗರಾಜ್ ವೃತ್ತಿಯಲ್ಲಿ ಚಾಲಕರಾಗಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಸಾನಿಕಾ ಅವರನ್ನು ವಿವಾಹವಾಗಿದ್ದರು. ದಂಪತಿ ಚಿಕ್ಕಮಗಳೂರಿನಲ್ಲಿ ವಾಸವಿದ್ದು, ಅವರಿಗೆ ಏಳು ತಿಂಗಳ ಗಂಡು ಮಗು ಇದೆ.

 

ವಿವಾಹದ ಬಳಿಕ ನಾಗರಾಜ್ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ವಿಚಾರ ಸಾನಿಕಾಗೆ ತಿಳಿದಿತ್ತು. ಈ ವಿಚಾರವಾಗಿ ದಂಪತಿಯ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ಬಾಣಂತನದ ನಂತರ ಪತಿಯ ಮನೆಗೆ ತೆರಳಿದ್ದ ಸಾನಿಕಾ, ಪರಿಸ್ಥಿತಿ ಬದಲಾಗದ ಕಾರಣ ಮತ್ತೆ ತವರು ಮನೆಗೆ ಮರಳಿದ್ದರು. ಬಳಿಕವೂ ಮೊಬೈಲ್ ಮೂಲಕ ಇಬ್ಬರ ನಡುವೆ ವಾಗ್ವಾದ ಮುಂದುವರಿದಿತ್ತು ಎಂದು ತಿಳಿದುಬಂದಿದೆ.

 

ಈ ಘಟನೆಗಳಿಂದ ತೀವ್ರವಾಗಿ ಮನನೊಂದ ಸಾನಿಕಾ, ಭಾನುವಾರ ನಸುಕಿನ ಸುಮಾರು 1.30 ಗಂಟೆಗೆ ಮನೆಯಲ್ಲೇ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಮೃತೆಯ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯಾಗಿರುವ ಪತಿ ನಾಗರಾಜ್‌ಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಗರಾಜ್ ತನ್ನ ಪ್ರಿಯತಮೆಯೊಂದಿಗೆ ಮಾತನಾಡುತ್ತಿದ್ದ ವಿಡಿಯೋ ಹಾಗೂ ಆಡಿಯೋ ಕ್ಲಿಪ್‌ಗಳನ್ನು ಸಾನಿಕಾಗೆ ಕಳುಹಿಸುತ್ತಿದ್ದ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಸಾನಿಕಾ, ಆತ್ಮಹತ್ಯೆಗೆ ಮುನ್ನ ಪತಿಗೆ ವಿಡಿಯೋ ಕಾಲ್ ಮಾಡಿದ್ದು, ಆತ ನೋಡುತ್ತಿರುವಾಗಲೇ ನೇಣಿಗೆ ಶರಣಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.