28 July 2026 |

ನೀಟ್ ಬಳಿಕ ಈಗ E20 ಪೆಟ್ರೋಲ್ ವಿರುದ್ಧ ಹೋರಾಟ: ಜನಾಭಿಪ್ರಾಯ ಸಂಗ್ರಹಕ್ಕೆ ಅರವಿಂದ್ ಕೇಜ್ರಿವಾಲ್ ಸಜ್ಜು

  • 27 Jul 2026 03:08:53 PM

ನವದೆಹಲಿ: ನೀಟ್(NEET) ಪರೀಕ್ಷಾ ಪೇಪರ್ ಲೀಕ್ ಮತ್ತು ಅದರ ನಂತರ ನಡೆದ ಅನಾಹುತಗಳನ್ನು ಮುಂದಿಟ್ಟು ದೆಹಲಿ ಮತ್ತು ದೇಶದ ಇತರ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಇದೀಗ ಎಥನಾಲ್ ಮಿಶ್ರಿತ E20 ಪೆಟ್ರೋಲ್ ಜಾರಿಯ ವಿರುದ್ಧ ತನ್ನ ಅಭಿಯಾನವನ್ನು ಮುಂದುವರಿಸಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಆಗಸ್ಟ್ 1ರಂದು ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ "ನ್ಯಾಷನಲ್ ಟೌನ್‌ಹಾಲ್ ಅಗೇನ್ಸ್ಟ್ E20"(National Townhall against E20) ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಘೋಷಿಸಿದ್ದಾರೆ. ಸಭೆ ಬೆಳಿಗ್ಗೆ 11:30 ಗಂಟೆಗೆ ನಡೆಯಲಿದ್ದು, ಸಾರ್ವಜನಿಕರು ಹಾಗೂ ಆನ್‌ಲೈನ್ ಮೂಲಕವೂ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ. 

 

ಕೇಜ್ರಿವಾಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು, "ದೇಶದ ಯುವಕರು ಒಗ್ಗಟ್ಟಾಗಿ ಧ್ವನಿ ಎತ್ತಿದಾಗ ಬದಲಾವಣೆ ಸಾಧ್ಯವಾಯಿತು. E20 ವಿಷಯದಲ್ಲಿಯೂ ಜನರು ಒಂದಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು" ಎಂದು ಕರೆ ನೀಡಿದ್ದಾರೆ. ಇದೇ ವೇಳೆ, ಕಂಟೆಂಟ್ ಕ್ರಿಯೇಟರ್‌ಗಳು ಕೂಡ ಸಭೆಯಲ್ಲಿ ಭಾಗವಹಿಸುವಂತೆ ಅವರು ಆಹ್ವಾನಿಸಿದ್ದಾರೆ.

 

ಕೇಜ್ರಿವಾಲ್ ಅವರ ಪ್ರಕಾರ, ಟೌನ್‌ಹಾಲ್ ಸಭೆಯಲ್ಲಿ ವಾಹನ ತಜ್ಞರು, ವಾಹನ ಮಾಲೀಕರು ಮತ್ತು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದು, ಬಳಿಕ ಸಂಗ್ರಹವಾಗುವ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರದ ಮುಂದೆ ಮಂಡಿಸುವ ಉದ್ದೇಶವಿದೆ. 

 

ಕೇಂದ್ರ ಸರ್ಕಾರವು ಎಥನಾಲ್ ಮಿಶ್ರಿತ ಇಂಧನವನ್ನು ಹೊರ ದೇಶಗಳಿಂದ ಇಂಧನ ಆಮದು ಅವಲಂಬನೆ ಕಡಿಮೆ ಮಾಡಲು ಮತ್ತು ಪರಿಸರ ಸ್ನೇಹಿ ಕ್ರಮವಾಗಿ ಉತ್ತೇಜಿಸುತ್ತಿದೆ ಎಂಬುವುದನ್ನು ತಿಳಿಯಬೇಕಾಗಿರುವುದು ಬಹಳ ಮುಖ್ಯ.