21 September 2026 |

ಸೂರಲ್ಪಾಡಿ ಬಳಿ ಖಾಸಗಿ ಬಸ್ ಅಪಘಾತ: 35 ಪ್ರಯಾಣಿಕರು ಸುರಕ್ಷಿತ

  • 27 Jul 2026 04:05:14 PM

ಮಂಗಳೂರು: ಮಂಗಳೂರು–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಸೂರಲ್ಪಾಡಿ ಸಮೀಪ ನಿರ್ಮಾಣ ಹಂತದಲ್ಲಿರುವ ಟೋಲ್ ಪ್ಲಾಜಾ ಬಳಿ ಖಾಸಗಿ ಎಕ್ಸ್‌ಪ್ರೆಸ್ ಬಸ್ ರಸ್ತೆ ಬದಿಯ ಸಿಮೆಂಟ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಬಸ್‌ನಲ್ಲಿದ್ದ 35 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

ಕಾರ್ಕಳದಿಂದ ಮಂಗಳೂರಿನತ್ತ ತೆರಳುತ್ತಿದ್ದ ಬಸ್ ಎದುರುಗಡೆಯಿಂದ ಸಾಗುತ್ತಿದ್ದ ಟಿಪ್ಪರ್ ಲಾರಿ ಏಕಾಏಕಿ ಎಡಭಾಗಕ್ಕೆ ತಿರುಗಿದ ಕಾರಣ, ಡಿಕ್ಕಿ ತಪ್ಪಿಸಲು ಚಾಲಕ ಬಸ್ ಅನ್ನು ಬಲಭಾಗಕ್ಕೆ ತಿರುಗಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಬಸ್ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸಿಮೆಂಟ್ ತಡೆಗೋಡೆಗೆ ಬಲವಾಗಿ ಅಪ್ಪಳಿಸಿದೆ.

 

ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಹಾನಿಗೊಳಗಾಗಿದೆ. ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ ಒಬ್ಬರು ಅಥವಾ ಇಬ್ಬರು ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಅಪಘಾತದ ಸುದ್ದಿ ತಿಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

 

ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತದ ಕುರಿತು ತನಿಖೆ ಆರಂಭಿಸಿದ್ದಾರೆ. ಅಪಘಾತ ಸಂಭವಿಸಿದ ವೇಳೆ ಬಸ್‌ನಲ್ಲಿ ಒಟ್ಟು 35 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.