28 July 2026 |

ಮಂಗಳೂರು: ಲೈಂಗಿಕ ಕಿರುಕುಳದ ಆರೋಪಕ್ಕೆ ಎಪಿಎಂಸಿ ಕಚೇರಿಯಲ್ಲಿ ಗದ್ದಲ, ಮಹಿಳಾ ತಂಡದ ದಾಳಿ

  • 27 Jul 2026 05:54:06 PM

ಮಂಗಳೂರು: ನಗರದ ಎಪಿಎಂಸಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಎಪಿಎಂಸಿ ಅಧಿಕಾರಿಯೊಬ್ಬರು ದೀರ್ಘಕಾಲದಿಂದ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರೆಂಬ ಗಂಭೀರ ಆರೋಪ ಹೊರಬಿದ್ದಿದೆ.

 

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ತಂಡ ಇಂದು ಕಚೇರಿಗೆ ದಾಳಿ ನಡೆಸಿ ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

 

ಸಂತ್ರಸ್ತೆ ತಿಂಗಳಿಗೆ 15,000 ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದು, ತನ್ನ ಬೇಡಿಕೆಗೆ ಒಪ್ಪಿದರೆ 25,000 ರೂ. ಸಂಬಳ ನೀಡುವುದಾಗಿ ಅಧಿಕಾರಿಯು ಆಮಿಷ ಒಡ್ಡಿದ್ದಾನೆ. ಆಕೆಯು ವಿರೋಧಿಸಿದ ನಂತರ, ಕಚೇರಿಯ ಕೆಲಸದಿಂದ ತೆಗೆದು ಶೌಚಾಲಯ ಶುಚಿಗೊಳಿಸುವ ಕೆಲಸಕ್ಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

 

ಇನ್ನೂ ವಿಚಿತ್ರವಾಗಿ, ಶನಿವಾರ ಅಧಿಕಾರಿಯು ಮಹಿಳೆಗೆ ಕರೆ ಮಾಡಿ, “ಸಹಕರಿಸಲು ಸಮ್ಮತಿ ಇದ್ದರೆ ಸೋಮವಾರ ಹಸಿರು ಸೀರೆ ಧರಿಸಿ ಬಾ” ಎಂದು ಷರತ್ತು ವಿಧಿಸಿದ್ದಾನೆ.

 

ಈ ವರ್ತನೆಗೆ ವಿರೋಧವಾಗಿ ಪ್ರತಿಭಾ ಕುಳಾಯಿ ಹಾಗೂ ಮಹಿಳಾ ಮುಖಂಡರು ಹಸಿರು ಸೀರೆ ಧರಿಸಿ ಕಚೇರಿಗೆ ಬಂದು ಅಧಿಕಾರಿಯನ್ನು ಗಟ್ಟಿಯಾಗಿ ಪ್ರಶ್ನಿಸಿದ್ದಾರೆ. ಗದ್ದಲದ ನಡುವೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

 

ಸಂತ್ರಸ್ತೆಗೆ ಕೆಲಸದ ಸ್ಥಳದಲ್ಲೇ ರಕ್ಷಣೆ ನೀಡಬೇಕು, ದೂರು ನೀಡಿದ ಕಾರಣಕ್ಕೆ ಆಕೆಯನ್ನು ವಜಾಗೊಳಿಸಬಾರದು ಎಂದು ಆಯೋಗ ಎಪಿಎಂಸಿಗೆ ಎಚ್ಚರಿಕೆ ನೀಡಿದೆ. ಪ್ರಕರಣವನ್ನು ಪೊಲೀಸ್ ಕಮಿಷನರ್, ಎಸಿಪಿ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ಕಳುಹಿಸಲಾಗುತ್ತಿದೆ.