28 July 2026 |

ಲಾವಣ್ಯ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು..! ಚೇತನ್ ಪೊಲೀಸ್ ವಶಕ್ಕೆ, ಮುಂದೇನಾಗಲಿದೆ?

  • 28 Jul 2026 12:39:09 AM

ಬಂಟ್ವಾಳ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಹಾಗೂ ಕರಾವಳಿಯನ್ನೇ ತಲೆತಗ್ಗಿಸುವಂತೆ ಮಾಡಿದ ಬಿ.ಸಿ.ರೋಡ್‌ನ ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ವಿರುದ್ಧದ ತನಿಖೆ ಹಲವು ವಾರಗಳಿಂದ ಸ್ಥಗಿತಗೊಂಡಿತ್ತು. ಇದಕ್ಕೆ ಕಾರಣ, ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದಾಗಿದೆ.

 

ಜುಲೈ 16, 2026ರಂದು ಸಂಜೆ ಸುಮಾರು 5:45ರ ವೇಳೆಗೆ, ಕಕ್ಕೆಪದವು ನಿವಾಸಿ ಲಾವಣ್ಯ ಅವರನ್ನು ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ಚೇತನ್, ಬಿ.ಸಿ.ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಾರಕಾಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ.

 

ಘಟನೆಯ ಮರುದಿನ ಮಂಗಳೂರಿನ ಪಚ್ಚನಾಡು ಪ್ರದೇಶದಲ್ಲಿ ಇಲಿಪಾಷಾಣ ಸೇವಿಸಿ, ದಿಕ್ಕುತೋಚದೆ ಅಂಗಡಿಯೊಂದರ ಪಕ್ಕದಲ್ಲಿ ಕುಳಿತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದರು.

 

ಬಳಿಕ ಆತನನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಆತ ಚೇತರಿಸಿಕೊಂಡಿದ್ದಾನೆ.

 

ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾದ ಚೇತನ್‌ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

 

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸವಿಸ್ತಾರ ತನಿಖೆ ನಡೆಸಲಾಗುತ್ತಿದ್ದು, ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ.