06 August 2026 |

ಕಿನ್ನಿಗೋಳಿ ಸಮೀಪ ಭೀಕರ ಅಪಘಾತ: ಖಾಸಗಿ ಬಸ್‌ಗೆ ಬುಲೆಟ್ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

  • 28 Jul 2026 09:18:03 AM

ಕಿನ್ನಿಗೋಳಿ: ಖಾಸಗಿ ಬಸ್ ಮತ್ತು ಬುಲೆಟ್ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ದುರ್ಘಟನೆ ಸೋಮವಾರ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರು ಪ್ರದೇಶದಲ್ಲಿ ನಡೆದಿದೆ.

 

ಮೃತರನ್ನು ಬಶೀರ್ ಎಂದು ಗುರುತಿಸಲಾಗಿದೆ. ಅವರು ಬುಲೆಟ್ ಬೈಕ್‌ನಲ್ಲಿ ಬಜಪೆ ಕಡೆಯಿಂದ ಕಿನ್ನಿಗೋಳಿ ಕಡೆಗೆ ತೆರಳುತ್ತಿದ್ದ ವೇಳೆ, ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ಗೆ ಎಕ್ಕಾರು ಬಳಿ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಬಶೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ಅಪಘಾತದ ವೇಳೆ ಬೈಕ್‌ನ ಹಿಂಬದಿ ಆಸನದಲ್ಲಿದ್ದ ಅವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

ಈ ಘಟನೆಗೆ ಸಂಬಂಧಿಸಿದಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.