06 August 2026 |

ಪುತ್ತೂರಿನಲ್ಲಿ ಅಕ್ರಮ ಮರ ಕಟಾವು ವಿರುದ್ಧ ಅರಣ್ಯ ಇಲಾಖೆಯ ಕ್ರಮ; ಎರಡು ಪ್ರತ್ಯೇಕ ಪ್ರಕರಣ ದಾಖಲು

  • 28 Jul 2026 11:22:34 AM

ಪುತ್ತೂರು: ತಾಲೂಕಿನ ಮಂಜಲಡ್ಡು ಹಾಗೂ ಬನ್ನೂರು ಸೇಡಿಯಾಪು ಭಾಗಗಳಲ್ಲಿ ಅಕ್ರಮವಾಗಿ ಮರಗಳನ್ನು ಕಡಿದ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಸ್ಥಳಗಳಿಂದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದೆ.

 

ಮಂಜಲಡ್ಡು ಪ್ರದೇಶದ ಡಿವೈಎಸ್ಪಿ ಕಚೇರಿ ಸಮೀಪ ವಿವಿಧ ಜಾತಿಯ ಮರಗಳನ್ನು ಅನುಮತಿ ಇಲ್ಲದೆ ಕಡಿದಿರುವ ಆರೋಪದಡಿ ವಳತ್ತಡ್ಕ ನಿವಾಸಿ ಸಂದೀಪ್ ಆರ್. ವಿರುದ್ಧ ಪ್ರಕರಣ ದಾಖಲಾಗಿದೆ. ಪರಿಶೀಲನೆ ವೇಳೆ 50ಕ್ಕೂ ಹೆಚ್ಚು ಅಕೇಶಿಯ ಹೈಬ್ರಿಡ್ ಮರದ ದಿಮ್ಮಿಗಳ ಜೊತೆಗೆ ಮ್ಯಾಂಜಿಯಮ್ ಹಾಗೂ ಗಾಳಿ ಮರದ ದಿಮ್ಮಿಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

 

ಡಿವೈಎಸ್ಪಿ ಕಚೇರಿಗೆ ಅಪಾಯವಾಗುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ಸಲ್ಲಿಸಿದ್ದ ಅರ್ಜಿಯನ್ನು ಆಧಾರವಾಗಿಸಿಕೊಂಡು, ಪಕ್ಕದ ಜಮೀನಿನಲ್ಲಿದ್ದ ಮರಗಳನ್ನೂ ಕಡಿದಿರುವ ಆರೋಪವೂ ಕೇಳಿಬಂದಿದೆ.

 

ಇದೇ ವೇಳೆ, ಬನ್ನೂರು ಸೇಡಿಯಾಪು ಪ್ರದೇಶದಲ್ಲಿ ಮೆಡಿಕಲ್ ಕಾಲೇಜು ಕಾಮಗಾರಿಗಾಗಿ ಅನುಮತಿ ನೀಡಿದ್ದ ವ್ಯಾಪ್ತಿಯನ್ನು ಮೀರಿ ಮರಗಳನ್ನು ಕಡಿದಿರುವ ಆರೋಪದಡಿ ಸರಪಾಡಿ ಅಜಿಲಮೊಗರು ನಿವಾಸಿ ಫಾರೂಕ್ ಪಿ. ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

 

ನಿಗದಿತ ಪ್ರದೇಶದ ಹೊರತಾಗಿಯೂ ಹೆಚ್ಚುವರಿ ವ್ಯಾಪ್ತಿಯಲ್ಲಿ ಮರ ಕಟಾವು ನಡೆದಿರುವ ಮಾಹಿತಿ ದೊರೆತ ಹಿನ್ನೆಲೆ, ಸಂಬಂಧಿತ ಮರದ ದಿಮ್ಮಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದೆ.